ತಿರುವನಂತಪುರಂ: ಹಿರಿಯ ನಾಗರಿಕರ ಆರೈಕೆಗೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೆ ತರಲು ಕೇರಳಂ ಸರ್ಕಾರವು ಚಿಂತನೆ ನಡೆಸಿದೆ.
ಈ ಯೋಜನೆಯಲ್ಲಿ ವೃದ್ಧರಿಗೆ ಸರಿಯಾದ ಆರೈಕೆ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲದೆ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಪ್ರಸ್ತುತ ಹಿರಿಯ ನಾಗರಿಕರು ಶೇ 18.7 ರಷ್ಟಿದ್ದು, 2036ರ ವೇಳೆಗೆ ಶೇ 22.8ರಷ್ಟಾಗುವ ಸಾಧ್ಯತೆ ಇದೆ ಎಂದು ವರದಿ ಮಾಹಿತಿ ನೀಡಿದೆ.
ಯುವಕರು ವಿದೇಶಗಳತ್ತ ವಲಸೆ ಹೆಚ್ಚು ಹೋಗುತ್ತಿರುವುದರಿಂದ ಹಿರಿಯ ನಾಗರಿಕರ ಆರೈಕೆ ಕೊರತೆ ಹೆಚ್ಚಾಗುತ್ತಿದೆ. ಹೀಗಾಗಿ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳಲ್ಲಿ ಈ ಕುರಿತು ವಿಶೇಷ ಕೋರ್ಸ್‌ಗಳನ್ನು ತೆರೆಯಲು ಸರ್ಕಾರ ಯೋಜನೆ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೃದ್ಧರ ಆರೈಕೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಸರ್ಕಾರಿ ಅಥವಾ ಇತರೆ ಉದ್ಯೋಗಾವಕಾಶಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ಅವರಿಗೆ ನೆರವಿನ ಜೊತೆಗೆ ಸೂಕ್ತ ಸೌಲಭ್ಯ ಒದಗಿಸಲಾಗುವುದು. ಹಿರಿಯ ನಾಗರಿಕರ ಸಮಸ್ಯೆ ಬಗೆಹರಿಸಲು ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

