HEALTH TIPS

ಮಣಿಪುರದ ಪರಿಹಾರ ಶಿಬಿರಗಳಲ್ಲಿ ಅಸಹಜ ಸಾವುಗಳ ಬಗ್ಗೆ ಆಘಾತ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್; ತನಿಖೆಗೆ ಆದೇಶ

ನವದೆಹಲಿ:  ಲೈಂಗಿಕ ದೌರ್ಜನ್ಯದ ಘಟನೆಯೊಂದೂ ಸೇರಿದಂತೆ ಮಣಿಪುರದ ಪರಿಹಾರ ಶಿಬಿರಗಳಲ್ಲಿಯ ಅಸಹಜ ಸಾವುಗಳ ಕುರಿತು ವರದಿಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ಆಘಾತವನ್ನು ವ್ಯಕ್ತಪಡಿಸಿದೆ. 


ಈ ಸಾವುಗಳ ಸುತ್ತಲಿನ ಪರಿಸ್ಥಿತಿಗಳು ಮತ್ತು ನಿರಾಶ್ರಿತರ ಸುರಕ್ಷತೆ ಹಾಗೂ ಘನತೆಯನ್ನು ಕಾಪಾಡಲು ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ಚಿ ಮತ್ತು ಮೋಹನಾ ಅವರ ಪೀಠವು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿತು.

2023ರ ಮಣಿಪುರ ಜನಾಂಗೀಯ ಹಿಂಸಾಚಾರದ ಸಂದರ್ಭದಲ್ಲಿಯ ಲೈಂಗಿಕ ಹಿಂಸೆ ಪ್ರಕರಣಗಳ ತನಿಖೆ ಮತ್ತು ವಿಚಾರಣೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿತ್ತು.

ಜಮ್ಮುಕಾಶ್ಮೀರ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ಸಮಿತಿಯು ಸಲ್ಲಿಸಿದ ವರದಿಯನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು. ಪರಿಹಾರದ ಸಮಸ್ಯೆಯನ್ನು ಎತ್ತಿ ತೋರಿಸಿರುವ ಮಿತ್ತಲ್ ವರದಿಯು ಪರಿಹಾರ ಶಿಬಿರಗಳಲ್ಲಿ ಅಸಹಜ ಸಾವುಗಳಿಗೆ ಸಂಬಂಧಿಸಿದ ವರದಿಗಳನ್ನು ಉಲ್ಲೇಖಿಸಿದೆ.

ಮರಣೋತ್ತರ ಪರೀಕ್ಷಾ ವರದಿಗಳು ಮತ್ತು ಸಾವುಗಳಿಗೆ ಕಾರಣಗಳನ್ನು ಗುರುತಿಸುವ ಇತರ ಸಂಬಂಧಿತ ದಾಖಲೆಗಳೊಂದಿಗೆ ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾದ ಎಲ್ಲ 25 ಅಸಹಜ ಸಾವುಗಳ ವಿವರಗಳನ್ನು ಸಲ್ಲಿಸುವಂತೆ ಮಣಿಪುರ ಮುಖ್ಯ ಕಾರ್ಯದರ್ಶಿಗೆ ಪೀಠವು ನಿರ್ದೇಶನ ನೀಡಿತು. ಜತೆಗೆ ಶಿಬಿರಗಳಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳನ್ನು ವಿವರಿಸುವಂತೆಯೂ ತಿಳಿಸಿತು.

ಶಿಬಿರಗಳಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರಿಗೂ ಸಾಕಷ್ಟು ವೈದ್ಯಕೀಯ ಸೌಲಭ್ಯಗಳು ಮತ್ತು ದಿನನಿತ್ಯದ ಅಗತ್ಯ ವಸ್ತುಗಳನ್ನು ತಕ್ಷಣವೇ ಒದಗಿಸುವಂತೆಯೂ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನ ನೀಡಿತು.

ಎಂಟು ಜಿಲ್ಲೆಗಳ ಪರಿಹಾರ ಶಿಬಿರಗಳಲ್ಲಿ ಒಟ್ಟು 640 ಸಾವುಗಳು ಸಂಭವಿಸಿದ್ದು, ಕೇವಲ 20 ಪ್ರಕರಣಗಳಲ್ಲಿ ಮಾತ್ರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂಬ ವರದಿಯಲ್ಲಿನ ಅಂಶವನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು. ಮೃತರ ಕುಟುಂಬಗಳಿಗೆ ಕೇವಲ 20,000 ರಿಂದ 30,000 ರೂ.ಗಳಷ್ಟು ಅಲ್ಪಮೊತ್ತದ ಪರಿಹಾರ ನೀಡಿರುವುದಕ್ಕೆ ನ್ಯಾಯಾಲಯವು ಕಳವಳ ವ್ಯಕ್ತಪಡಿಸಿತು. ತಕ್ಷಣವೇ ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ಹಾಗೂ ಎಲ್ಲಾ ಅಸಹಜ ಸಾವುಗಳ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾತಿ, ಸಾವಿನ ಕಾರಣಗಳ ಪತ್ತೆ, ಶಿಬಿರಗಳಲ್ಲಿ ನಿರಾಶ್ರಿತರ ಸುರಕ್ಷತೆ ಮತ್ತು ಘನತೆ ಹಾಗೂ ಈಗಾಗಲೇ ದಾಖಲಾದ ಪ್ರಕರಣಗಳ ತ್ವರಿತ ತನಿಖೆಯನ್ನು ಖಚಿತಪಡಿಸಿಕೊಳ್ಳುವಂತೆ ಮಣಿಪುರ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನ ನೀಡಿತು.

25 ಅಸಹಜ ಸಾವುಗಳಿಗೆ ಸಂಬಂಧಿಸಿದಂತೆ ಮಿತ್ತಲ್ ಸಮಿತಿಯು ಜುಲೈ 4ರಂದು ಕೋರಿದ್ದ ಮಾಹಿತಿಗೆ ಸ್ಪಂದಿಸದ್ದಕ್ಕಾಗಿ ಮಣಿಪುರದ ಅಡ್ವೋಕೇಟ್ ಜನರಲ್ ಅವರನ್ನು ಪೀಠವು ತರಾಟೆಗೆತ್ತಿಕೊಂಡಿತು.

'ನಾವೇ ಆದೇಶ ಹೊರಡಿಸುವಂತೆ ಮಾಡಬೇಡಿ ಎಂದು ನಿಮ್ಮ ಮುಖ್ಯ ಕಾರ್ಯದರ್ಶಿಗೆ ತಿಳಿಸಿ. ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎನ್ನುವುದನ್ನು ನಮಗೆ ಹೇಳಿ' ಎಂದು ಮುಖ್ಯ ನ್ಯಾ.ಸೂರ್ಯಕಾಂತ್ ಕಟುವಾಗಿ ಹೇಳಿದರು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries