ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮತ್ತೆ ತೀವ್ರವಾಗಿರುವ ಕಾರಣದಿಂದಾಗಿ ಕಚ್ಚಾ ತೈಲದ ಬೆಲೆಯು ಬ್ಯಾರಲ್‌ಗೆ 100 ಡಾಲರ್‌ಗಿಂತ ಹೆಚ್ಚಾಗಿದೆ. ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಇದರಿಂದಾಗಿ ಲೀಟರ್ ಪೆಟ್ರೋಲ್ ಮಾರಾಟದಿಂದ ₹5ರಷ್ಟು ಹಾಗೂ ಡೀಸೆಲ್ ಮಾರಾಟದಿಂದ ₹23ರಷ್ಟು ನಷ್ಟ ಅನುಭವಿಸುತ್ತಿವೆ ಎಂದು ಮಾರುಕಟ್ಟೆ ಪರಿಣತರು ಹೇಳಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾ ತೈಲದ ಬೆಲೆಯು ಜುಲೈ 23ರ ನಂತರ ಇದೇ ಮೊದಲ ಬಾರಿಗೆ 100 ಡಾಲರ್‌ಗಿಂತ ಹೆಚ್ಚಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 2.5ರಷ್ಟು ಜಾಸ್ತಿ ಆಗಿದೆ.
'ಸೆಪ್ಟೆಂಬರ್‌ನಲ್ಲಿ ಇದುವರೆಗಿನ ಕಚ್ಚಾ ತೈಲದ ಬೆಲೆಯ ಸರಾಸರಿಯ ಆಧಾರದಲ್ಲಿ ಲೆಕ್ಕ ಹಾಕಿದರೆ ಎಲ್‌ಪಿಜಿ ಸಿಲಿಂಡರ್ ಮಾರಾಟದಿಂದ ಸರ್ಕಾರಿ ಸ್ವಾಮ್ಯದ ಕಂಪನಿಗಳು ಸಿಲಿಂಡರ್ ಒಂದಕ್ಕೆ 200ರಷ್ಟು ನಷ್ಟ ಅನುಭವಿಸುತ್ತಿವೆ' ಎಂದು ಐಸಿಆರ್‌ಎ ಸಂಸ್ಥೆಯ ಕಾರ್ಪೊರೇಟ್ ರೇಟಿಂಗ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ ಪ್ರಶಾಂತ್ ವಸಿಷ್ಠ ಹೇಳಿದ್ದಾರೆ.
'ಈಗಿನ ಜಾಗತಿಕ ಬಿಕ್ಕಟ್ಟು ಇದೇ ರೀತಿ ಮುಂದುವರಿದರೆ ಕಚ್ಚಾ ತೈಲದ ಬೆಲೆಯು ಇನ್ನಷ್ಟು ಹೆಚ್ಚಾಗಬಹುದು' ಎಂದು ಅವರು ಹೇಳಿದ್ದಾರೆ.
ಮೂರು ತಿಂಗಳಿಗೂ ಹೆಚ್ಚಿನ ಅವಧಿಯಿಂದ ದೇಶದ ರಿಟೇಲ್ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಏಪ್ರಿಲ್‌ನಿಂದ ಜುಲೈವರೆಗಿನ ಅವಧಿಯಲ್ಲಿ ಭಾರತದ ಕಚ್ಚಾ ತೈಲ ಆಮದು ಪ್ರಮಾಣವು ಶೇ 56ರಷ್ಟು ಹೆಚ್ಚಾಗಿದೆ.
ಸೆಪ್ಟೆಂಬರ್ 8ರ ಅಂಕಿ-ಅಂಶದ ಪ್ರಕಾರ ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಸರಾಸರಿ ಬೆಲೆಯು ಬ್ಯಾರಲ್ ಒಂದಕ್ಕೆ 108.91 ಡಾಲರ್ ಆಗಿದೆ ಎಂದು ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಘಟಕ (ಪಿಪಿಎಸಿ) ಹೇಳಿದೆ.
'ಬಿಕ್ಕಟ್ಟಿನ ತೀವ್ರತೆ ಕಡಿಮೆ ಆದರೆ ಮಾತ್ರ ಕಚ್ಚಾ ತೈಲದ ಬೆಲೆ ಕಡಿಮೆ ಆಗುತ್ತದೆ' ಎಂದು ಬ್ರಿಕ್‌ವರ್ಕ್ ರೇಟಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ರಾಜೀವ್ ಶರಣ್ ಹೇಳಿದ್ದಾರೆ. ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಭಾರತದ ಆಮದು ವೆಚ್ಚ ಹೆಚ್ಚುತ್ತದೆ, ವ್ಯಾಪಾರ ಕೊರತೆ ಜಾಸ್ತಿ ಆಗುತ್ತದೆ, ರೂಪಾಯಿ ದುರ್ಬಲಗೊಳ್ಳುತ್ತದೆ ಎಂದು ಶರಣ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೆಚ್ಚು ಎಥೆನಾಲ್ ಮಿಶ್ರಣಕ್ಕೆ ಚಿಂತನೆ
ಪೆಟ್ರೋಲ್‌ನಲ್ಲಿ ಈಗಿರುವ ಶೇಕಡ 20ರಷ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಎಥೆನಾಲ್ ಮಿಶ್ರಣ ಮಾಡಲು ಅವಕಾಶ ಕೊಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ, ಫ್ಲೆಕ್ಸಿ-ಫ್ಯುಯೆಲ್ ವಾಹನಗಳು ಇದಕ್ಕೆ ಅನುವು ಮಾಡಿಕೊಡುತ್ತಿವೆ ಎಂದು ಪ್ರಧಾನಿಯವರ ಸಲಹೆಗಾರ ತರುಣ್ ಕಪೂರ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಬುಧವಾರ ಮಾತನಾಡಿದ ಅವರು, 'ಇ-20 ಯೋಜನೆಯು ಇದುವರೆಗೆ ಬಹಳ ಯಶಸ್ಸು ಕಂಡಿದೆ. ಹಲವು ಕಂಪನಿಗಳು ಫ್ಲೆಕ್ಸಿ-ಫ್ಯುಯೆಲ್ ವಾಹನ ಬಿಡುಗಡೆ ಮಾಡುವ ಯೋಜನೆಯನ್ನು ಪ್ರಕಟಿಸಿವೆ' ಎಂದು ಹೇಳಿದ್ದಾರೆ.
'ಈಗ ನಮ್ಮ ಆದ್ಯತೆಯು ಫ್ಲೆಕ್ಸಿ-ಫ್ಯುಯೆಲ್ ವಾಹನಗಳ ಕಡೆ ಸಾಗುವುದು ಹಾಗೂ ಶೇ 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣಕ್ಕೆ ಅವಕಾಶ ಮಾಡಿಕೊಡುವುದು' ಎಂದು ಅವರು ತಿಳಿಸಿದ್ದಾರೆ. ಇಂತಹ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಜೊತೆಯಲ್ಲೇ ಪೆಟ್ರೋಲ್ ಬಂಕ್‌ಗಳಲ್ಲಿ ಶುದ್ಧ ಎಥೆನಾಲ್ ಲಭ್ಯತೆಯನ್ನು ಹೆಚ್ಚು ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.
ಜೈವಿಕ ಇಂಧನದ ಬಳಕೆಗೆ ಆದ್ಯತೆ ನೀಡುವುದು ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಹತ್ವದ್ದಾಗುತ್ತದೆ. ಈ ಬಿಕ್ಕಟ್ಟಿನ ಕಾರಣದಿಂದಾಗಿ ತೈಲ ಪೂರೈಕೆಗೆ ಧಕ್ಕೆ ಆಗಿದ್ದು, ಕಚ್ಚಾ ತೈಲ ಬೆಲೆ ಹೆಚ್ಚಾಗಿದೆ. ಬೆಲೆಯು ಇನ್ನೂ ಹೆಚ್ಚಾಗುವ ಭೀತಿ ಕೂಡ ಇದೆ ಎಂದು ಅವರು ಹೇಳಿದ್ದಾರೆ.

