HEALTH TIPS

ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ: ರಿಪೋರ್ಟರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಆಂಟೋ ಆಗಸ್ಟಿನ್ ಬಂಧನ

ತಿರುವನಂತಪುರಂ: ಕೇರಳದ ಮಲಯಾಳಂ ಸುದ್ದಿ ವಾಹಿನಿ ರಿಪೋರ್ಟರ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ನಿರ್ವಹಣಾ ಸಂಪಾದಕ ಆಂಟೋ ಆಗಸ್ಟಿನ್ ಅವರನ್ನು ಅಬಕಾರಿ ಇಲಾಖೆ ಗುರುವಾರ ಮುಂಜಾನೆ ಬಂಧಿಸಿದೆ. 


ವಯನಾಡಿನ ವಾಳವಟ್ಟದಲ್ಲಿರುವ ಅವರ ಕುಟುಂಬದ ನಿವಾಸದ ಮೇಲೆ ನಡೆದ ದಾಳಿಯ ವೇಳೆ ಕಾನೂನುಬದ್ಧ ಮಿತಿಗಿಂತ ಅಧಿಕ ಪ್ರಮಾಣದ ವಿದೇಶಿ ಮದ್ಯ ಮತ್ತು ವೈನ್ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 

ವರದಿಗಳ ಪ್ರಕಾರ, ಮನೆಯಲ್ಲಿ ಬರೋಬ್ಬರಿ 67 ಲೀಟರ್ ವಿದೇಶಿ ಮದ್ಯ ಮತ್ತು ವೈನ್ ಸಂಗ್ರಹಿಸಿಟ್ಟಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ಇದು ವೈಯಕ್ತಿಕ ಬಳಕೆಗೆ ನಿಗದಿಪಡಿಸಲಾದ ಕಾನೂನು ಮಿತಿಗಿಂತ ಹೆಚ್ಚಾಗಿರುವುದರಿಂದ, ಅಬಕಾರಿ ಕಾಯ್ದೆಯ ಜಾಮೀನು ರಹಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಬಂಧನದ ಬಳಿಕ ಆಲುವಾ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಸುಲ್ತಾನ್ ಬತ್ತೇರಿ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲು ಸಿದ್ಧತೆ ನಡೆಸಲಾಗಿದೆ.

ಮೆಸ್ಸಿ ಭೇಟಿಯ ವಂಚನೆ ತನಿಖೆ ವೇಳೆ ಬಯಲಾದ ಮದ್ಯ ಸಂಗ್ರಹ:

ವಿಶ್ವವಿಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಮತ್ತು ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಕೇರಳಕ್ಕೆ ಕರೆತರುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಆರ್ಥಿಕ ವಂಚನೆ ಮತ್ತು ಅಕ್ರಮಗಳ ಪ್ರಕರಣದಲ್ಲಿ ಆಂಟೋ ಆಗಸ್ಟಿನ್ ಪ್ರಮುಖ ಆರೋಪಿಯಾಗಿದ್ದಾರೆ.

ಈ ಸಂಬಂಧ ಡಿಜಿಟಲ್ ಸಾಕ್ಷ್ಯಾಧಾರಗಳ ಶೋಧಕ್ಕಾಗಿ ಎರ್ನಾಕುಲಂನಲ್ಲಿರುವ ಪ್ರಸಾರ ಸಂಸ್ಥೆಯ ಪ್ರಧಾನ ಕಚೇರಿ ಮೇಲೆ ವಿಶೇಷ ತನಿಖಾ ತಂಡ (SIT) ದಾಳಿ ನಡೆಸಿತ್ತು. ಇದೇ ಪ್ರಕರಣದ ಭಾಗವಾಗಿ ಅವರ ಮನೆಯಲ್ಲೂ ಶೋಧ ನಡೆಸುತ್ತಿದ್ದಾಗ ಮದ್ಯದ ಸಂಗ್ರಹ ಪತ್ತೆಯಾಗಿದ್ದು, ಈ ಕುರಿತು ಎಸ್‌ಐಟಿ ಅಬಕಾರಿ ಇಲಾಖೆಗೆ ಮಾಹಿತಿ ನೀಡಿತ್ತು.

ಬಂಧನದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಆಂಟೋ ಆಗಸ್ಟಿನ್, ತಾನು ಎಂದಿಗೂ ಮದ್ಯಪಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆರ್ಥಿಕ ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಈಗಾಗಲೇ ಪೊಲೀಸರಿಗೆ ಹಸ್ತಾಂತರಿಸಿರುವುದಾಗಿ ತಿಳಿಸಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries