ನವದೆಹಲಿ: ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ನಿರಂತರವಾಗಿ 'ಸ್ಕ್ರಾಲ್' (ಇನ್ಫಿನೈಟ್ ಸ್ಕ್ರಾಲ್) ಮಾಡುವ ಮತ್ತು 'ಆಟೋಪ್ಲೆ'ನಂತಹ ವಿನ್ಯಾಸದ ವೈಶಿಷ್ಟ್ಯಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಯಾವುದಾದರೂ ನೀತಿ ರೂಪಿಸುವ ಕುರಿತ ಚಿಂತಿಸಿದೆಯೇ ಎಂದು ದೆಹಲಿ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವ ಮತ್ತು ವ್ಯಸನ ಉಂಟುಮಾಡುವ ವಿನ್ಯಾಸದ ವೈಶಿಷ್ಟ್ಯಗಳನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ನಿತಿನ್ ವಸುದೇವ ಸಾಂಬ್ರೆ ಮತ್ತು ಅಮಿತ್ ಶರ್ಮಾ ಅವರಿದ್ದ ಪೀಠ ನಡೆಸಿತು.
ಈ ಬಗ್ಗೆ ತಮ್ಮ ಬಳಿ ನಿರ್ದಿಷ್ಟ ಸೂಚನೆಗಳಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಪೀಠಕ್ಕೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠವು, 'ಈ ವಿಷಯವನ್ನು ಮೂರು ವಾರಗಳ ನಂತರ ವಿಚಾರಣೆಗೆ ತೆಗೆದುಕೊಳ್ಳುತ್ತೇವೆ, ಅಷ್ಟರಲ್ಲಿ ಅದಕ್ಕೆ ಸಂಬಂಧಿಸಿದ ಮಾಹಿತಿ, ಸೂಚನೆಗಳನ್ನು ಪಡೆದುಕೊಳ್ಳಿ' ಎಂದು ನಿರ್ದೇಶಿಸಿತು.
'ಈ ಅರ್ಜಿಯಲ್ಲಿ ಕೆಲವು ಪ್ರಮುಖ ವಿಷಯಗಳ ಪ್ರಸ್ತಾಪವಿದೆ. ಅವು ನೀತಿ ನಿರೂಪಕರ ವ್ಯಾಪ್ತಿಗೆ ಒಳಪಡುವ ವಿಷಯಗಳು. ಹೀಗಾಗಿ ಅರ್ಜಿದಾರರು ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಬಹುದು' ಎಂದು ಶರ್ಮಾ ಸಲಹೆ ನೀಡಿದರು.

