ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ನಡೆಸಿದ ಪ್ರತಿಭಟನೆ ಕುರಿತ ಸುದ್ದಿ ಪ್ರಸರಣವು, ಪ್ರಮುಖ ಸುದ್ದಿವಾಹಿನಿಗಳ ವಿಶ್ವಾಸಾರ್ಹತೆಯ ಕೊರತೆ ಮತ್ತು ಸಾರ್ವಜನಿಕ ಆಲೋಚನೆಗಳನ್ನು ರೂಪಿಸುವಲ್ಲಿ ಸ್ವತಂತ್ರ ಡಿಜಿಟಲ್ ವೇದಿಕೆ ಮತ್ತು ಮುದ್ರಣ ಮಾಧ್ಯಮಗಳ ಶಕ್ತಿ ವೃದ್ಧಿಯಾಗುತ್ತಿರುವುದನ್ನು ತೋರಿಸುತ್ತದೆ ಎಂದು ಭಾರತೀಯ ಸಂಪಾದಕರ ಕೂಟ ಸೋಮವಾರ ತಿಳಿಸಿದೆ.
'ಆಜ್‌ತಕ್', 'ಎಬಿಪಿ ನ್ಯೂಸ್', 'ಟಿವಿ9 ಭರತವರ್ಷ', 'ಇಂಡಿಯಾ ಟಿವಿ', ಸ್ವತಂತ್ರ ಡಿಜಿಟಲ್ ಮಾಧ್ಯಮಗಳು, 'ದಿ ಇಂಡಿಯನ್ ಎಕ್ಸ್‌ಪ್ರೆಸ್', 'ದಿ ಹಿಂದು', 'ಟೈಮ್ಸ್ ಆಫ್ ಇಂಡಿಯಾ', 'ಹಿಂದೂಸ್ತಾನ್' ಮತ್ತು 'ದೈನಿಕ್ ಭಾಸ್ಕರ್' ಪ್ರಕಟಿಸಿರುವ ವರದಿಗಳ ಬಗ್ಗೆ ಅಧ್ಯಯನ ನಡೆಸಿರುವ ಸಂಸ್ಥೆಯು, ವರದಿಯನ್ನು ಬಿಡುಗಡೆಗೊಳಿಸಿದೆ.
'ಯುವಕರು ಟಿ.ವಿ ವಾಹಿನಿಗಳನ್ನು 'ಗೋಧಿ ಮೀಡಿಯಾ' ಎಂದು ಕರೆಯುವ ಮೂಲಕ ಅವನ್ನು ವಿರೋಧಿಗಳು ಎಂದು ಪರಿಗಣಿಸಿದ್ದರು' ಎಂದು ಹೇಳಿದೆ.
'ಪ್ರಸ್ತುತ ವಿದ್ಯಮಾನವು ವಿಶ್ವಾಸಾರ್ಹತೆಯ ಕೊರತೆಯ ಸ್ಪಷ್ಟ ಚಿತ್ರಣವಾಗಿದೆ. ಟಿ.ವಿ ಮಾಧ್ಯಮಗಳು ಸಾರ್ವಜನಿಕರ ನಂಬಿಕೆ ಉಳಿಸಿಕೊಳ್ಳಲು ಕಷ್ಟಪಡುತ್ತಿರುವಾಗ, ಡಿಜಿಟಲ್ ವೇದಿಕೆ ಮತ್ತು ಮುದ್ರಣ ಮಾಧ್ಯಮಗಳು ವಿದ್ಯಾರ್ಥಿಗಳ ಧ್ವನಿಗೆ ವೇದಿಕೆಯಾಗಿದ್ದವು' ಎಂದು ಅಧ್ಯಯನ ವರದಿ ತಿಳಿಸಿದೆ.
ಸುದ್ದಿ ವಾಹಿನಿಗಳು ಪ್ರತಿಭಟನಕಾರರನ್ನು 'ಗೂಂಡಾಗಳು', 'ದೇಶದ್ರೋಹಿಗಳು', 'ಹಣ ಪಡೆದಿರುವವರು', 'ರಾಜಕೀಯ ಪ್ರೇರಿತರು' ಎಂದು ಹೇಳಿರುವುದನ್ನು ಉಲ್ಲೇಖಿಸಿರುವ ಅಧ್ಯಯನ ವರದಿಯು, 'ಮುಖ್ಯ ವಾಹಿನಿಗಳು ಪಿತೂರಿಯ ದಾರಿ ಆರಿಸಿಕೊಂಡಿದ್ದವು. ಸ್ವತಂತ್ರ ಮತ್ತು ಅಂತರರಾಷ್ಟ್ರೀಯ ವೇದಿಕೆಗಳು ಶಿಕ್ಷಣ ವ್ಯವಸ್ಥೆಯ ವೈಫಲ್ಯ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಪ್ರಚುರಪಡಿಸಿದವು' ಎಂದು ತಿಳಿಸಿದೆ.
'ಹಿಂದಿ ಟಿ.ವಿ ವಾಹಿನಿಗಳು ಪೊಲೀಸರು ಮತ್ತು ಸರ್ಕಾರದ ನಿರೂಪಣೆಯನ್ನೇ ವೈಭವೀಕರಿಸಿದವು. ಪ್ರತಿಭಟನೆಯ ಘಟನಾವಳಿಗಳು, ಮಾನವೀಯ ವರದಿ ಮತ್ತು ಹೊಣೆಗಾರಿಕೆಗೆ ಒತ್ತಾಯಿಸುವ ವರದಿಗಳ ಮೂಲಕ ಮುದ್ರಣ ಮಾಧ್ಯಮಗಳು ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿವೆ' ಎಂದು ವರದಿ ತಿಳಿಸಿದೆ.

