ವಿಶ್ವಸಂಸ್ಥೆ: ಸಮುದ್ರದ ಮಟ್ಟ ಏರಿಕೆ ಮತ್ತು ಶಾಶ್ವತ ಮುಳುಗಡೆಯಿಂದ ಕೋಲ್ಕತ್ತ ಮತ್ತು ಮುಂಬೈ ನಗರಗಳಲ್ಲಿ ಲಕ್ಷಾಂತರ ಜನರು ಮನೆ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.
'ಸಮುದ್ರದ ಮಟ್ಟ ಏರಿಕೆ ಎಂಬುದು ಮುಂದೆಂದೋ ಎದುರಾಗುವ ಅಪಾಯವಾಗಿ ಉಳಿದಿಲ್ಲ; ಅದು ಈಗ ಹಿಂದೆಂದಿಗಿಂತಲೂ ವೇಗವಾಗಿ ಸಂಭವಿಸುತ್ತಿದ್ದು, ಜಗತ್ತಿನಾದ್ಯಂತ ಮನುಕುಲಕ್ಕೆ ತೀವ್ರ ಬೆದರಿಕೆಯಾಗಿದೆ.
ನೀರ್ಗಲ್ಲು ಕರಗುವಿಕೆ, ತಾಪಮಾನ ಏರಿಕೆಯೇ ಸಮುದ್ರ ಮಟ್ಟ ಹೆಚ್ಚಳಕ್ಕೆ ಪ್ರಮುಖ ಕಾರಣ' ಎಂದು 'ಸಮುದ್ರ ಮಟ್ಟ ಏರಿಕೆಗೆ ಸಂಬಂಧಿಸಿದ ಸವಾಲುಗಳು ಮತ್ತು ಅದನ್ನು ಎದುರಿಸುವ ವಿಧಾನಗಳು ಹಾಗೂ ಮಾರ್ಗಗಳು' ಎಂಬ ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಸಮುದ್ರದ ಮಟ್ಟ ಹೆಚ್ಚಳವು ಈಗಾಗಲೇ ನಗರದ ಮೂಲಸೌರ್ಯಗಳಾದ ನೀರಿನ ವ್ಯವಸ್ಥೆ, ಸಂಪರ್ಕ ಜಾಲ, ಇಂಧನ ಗ್ರಿಡ್, ಕಟ್ಟಡಗಳು, ಅಂತರ್ಜಲ ಸಂಪನ್ಮೂಲಗಳಿಗೆ ಹಾನಿ ಮಾಡುತ್ತಿದೆ. ಇದರಿಂದಾಗಿ ದೀರ್ಘಾವಧಿ ಅಭಿವೃದ್ಧಿ, ಆರ್ಥಿಕ ಸ್ಥಿರತೆ ಮತ್ತು ಮಾನವ ಹಕ್ಕುಗಳ ಸಮರ್ಪಕ ಬಳಕೆಗೆ ಅಡ್ಡಿಯಾಗುವ ದೂರಗಾಮಿ ಪರಿಣಾಮಗಳು ಆಗುತ್ತಿವೆ' ಎಂದು ಸೋಮವಾರ ಬಿಡುಗಡೆಯಾದ ವರದಿಯಲ್ಲಿ ಹೇಳಲಾಗಿದೆ.
'2014-23ರ ನಡುವೆ ಸಮುದ್ರ ಮಟ್ಟ ಹೆಚ್ಚಳ ಪ್ರಮಾಣವು ಜಾಗತಿಕವಾಗಿ ಪ್ರತಿವರ್ಷ 4.7 ಎಂ.ಎಂ. ಇದ್ದರೆ, 2024ರಲ್ಲಿ ಇದು 5.9 ಎಂ.ಎಂ. ಇತ್ತು. ಕೆಲವು ಪ್ರದೇಶಗಳಲ್ಲಿ ಈ ಪ್ರಮಾಣವು ಕಳೆದ 4 ಸಾವಿರ ವರ್ಷಗಳಲ್ಲೇ ಅಧಿಕ ಹಾಗೂ 2050ರ ವರೆಗೂ ಇದು ಮುಂದುವರಿಯಲಿದೆ' ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.
ಪ್ರಮುಖ ಪರಿಣಾಮಗಳು...
* ನ್ಯೂಯಾರ್ಕ್ ಗ್ವಾಂಗ್ಝೌ ರೀತಿಯ ಶ್ರೀಮಂತ ನಗರಗಳಲ್ಲಿ ಕರಾವಳಿ ಮೂಲಸೌಕರ್ಯಗಳ ನಿರ್ನಾಮ ಆರ್ಥಿಕವಾಗಿ ದೊಡ್ಡ ನಷ್ಟ
* ಕೋಲ್ಕತ್ತ ಮುಂಬೈ ನಗರಗಳಲ್ಲಿ 1.4 ಕೋಟಿಯಷ್ಟು ಜನರು ಶಾಶ್ವತವಾಗಿ ಮನೆ ಕಳೆದುಕೊಳ್ಳುವ ಆತಂಕ
* ನೈರ್ಮಲ್ಯ ವ್ಯವಸ್ಥೆ ದುರ್ಬಲಗೊಳಿಸಿ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ
* ನೀರು ಕಲುಷಿತವಾಗಿ ಜಲ ಸಂಬಂಧಿ ಅನಾರೋಗ್ಯ ಹೆಚ್ಚಳ
* ಸಾವು- ನೋವಿನ ಪ್ರಮಾಣ ಹೆಚ್ಚಲಿದೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ
* ಭೂಮಿ ಮುಳುಗಡೆ ಭೀಕರ ಪ್ರವಾಹದ ಅಪಾಯಗಳು ಹೆಚ್ಚಲಿವೆ
* ಅಂತರ್ಜಲ ಅವಲಂಬನೆ ವ್ಯವಸ್ಥೆ ಹದಗೆಟ್ಟು ಕೃಷಿ ಇಳುವರಿ ತಗ್ಗಲಿದೆ
* ಮೀನುಗಾರಿಕೆ ಸಣ್ಣ ಪ್ರಮಾಣದ ಪ್ರವಾಸೋದ್ಯಮ ಮತ್ತು ಬಂದರು ಆಧರಿತ ಸ್ಥಳೀಯ ಅರ್ಥವ್ಯವಸ್ಥೆ ಮೇಲೆ ಪರಿಣಾಮ
* ರಾಜ್ಯಗಳ ಗಡಿಗಳನ್ನೇ ಶಾಶ್ವತವಾಗಿ ಕಣ್ಮರೆಯಾಗಿಸಬಲ್ಲದು

