ನವದೆಹಲಿ: ಅರ್ಹ ಮತದಾರರನ್ನು ಕಿತ್ತುಹಾಕುವುದು ಮತ್ತು ಅನರ್ಹರನ್ನು ಸೇರ್ಪಡೆ ಮಾಡುವುದೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ (ಎಸ್‌ಐಆರ್) ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಟೀಕಿಸಿದ್ದಾರೆ.
'ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ಚುನಾವಣಾ ಆಯೋಗದ ಉದ್ದೇಶವಾಗಿದ್ದರೆ, ದೇಶದಲ್ಲಿ ಚುನಾವಣೆ ನಡೆಸುವ ಅಗತ್ಯವೇನಿದೆ' ಎಂದು ಅವರು ಪ್ರಶ್ನಿಸಿದ್ದಾರೆ.
ಎಸ್‌ಐಆರ್ ಭಾಗವಾಗಿ ಹೆಚ್ಚುವರಿ ಪುರಾವೆ ಒದಗಿಸಲು ಆಯೋಗವು ನೋಟಿಸ್ ಜಾರಿ ಮಾಡಿರುವ ಬೆನ್ನಲ್ಲೇ, ಸಿಬಲ್ ಅವರು ಆಯೋಗದ ವಿರುದ್ಧ ಹರಿಹಾಯ್ದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನನಗೇ ಈ ರೀತಿಯಾಗಿದೆ ಎಂದರೆ, ಇನ್ನು ಸಾಮಾನ್ಯ ಜನರ ಗತಿ ಏನು' ಎಂದು ಪ್ರಶ್ನಿಸಿದ್ದಾರೆ.
'ಜ್ಞಾನೇಶ್ ಕುಮಾರ್ ಅವರು ಆಯೋಗದ ಮುಖ್ಯಸ್ಥರ ಸ್ಥಾನದಲ್ಲಿ ಏಕೆ ಕುಳಿತಿದ್ದಾರೆ?, ಯಾವ ಮಾನದಂಡದ ಮೇಲೆ ಅವರು ಇದನ್ನೆಲ್ಲಾ ಮಾಡುತ್ತಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿದ್ದರೂ ನೋಟಿಸ್ ರವಾನಿಸಿದ್ದಾರೆಂದು ತಿಳಿದು ಆಘಾತವಾಯಿತು' ಎಂದು ಹೇಳಿದ್ದಾರೆ.
ಮತ್ತಷ್ಟು ಪ್ರಮುಖರಿಗೆ ನೋಟಿಸ್
ದೆಹಲಿಯಲ್ಲಿ ನಡೆಯುತ್ತಿರುವ ಎಸ್‌ಐಆರ್ ಭಾಗವಾಗಿ ಚುನಾವಣಾ ಆಯೋಗವು ನೋಟಿಸ್ ಜಾರಿಗೊಳಿಸಿದ 32 ಲಕ್ಷ ಮತದಾರರಲ್ಲಿ ಮತ್ತಷ್ಟು ಪ್ರಮುಖರು ಸೇರಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಮಾಜಿ ಚುನಾವಣಾ ಆಯುಕ್ತ ಅರುಣ್ ಗೋಯಲ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಹೈದರ್ ಮತ್ತು ಕೇಂದ್ರದ ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ ಅವರೂ ಹೆಚ್ಚುವರಿ ಪುರಾವೆಗಳನ್ನು ಒದಗಿಸಬೇಕು ಎಂದು ಆಯೋಗ ನೋಟಿಸ್ ನೀಡಿದೆ.
ಹಿರಿಯ ವಕೀಲರಾದ ದುಷ್ಯಂತ್ ದವೆ ಇಂದಿರಾ ಜೈಸಿಂಗ್ ಆನಂದ್ ಗ್ರೋವರ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಬಿ.ಎಸ್.ಗವಾಯಿ ರಾಮಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಮಾಜಿ ಗೃಹ ಕಾರ್ಯದರ್ಶಿ ವಾಲ್ಮೀಕಿ ಪ್ರಸಾದ್ ಮಾಜಿ ಸಂಸದ ಪಿನಾಕಿ ಮಿಶ್ರಾ ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರ್ಯ ಮತ್ತು ನಗರ ಯೋಜಕ ಕೆ.ಟಿ.ರವೀಂದ್ರನ್ ಅವರಿಗೂ ಆಯೋಗ ನೋಟಿಸ್ ನೀಡಿದೆ.
2002ರ ಮತದಾರರ ಪಟ್ಟಿಯೊಂದಿಗೆ ಹೆಸರು ಹೊಂದಾಣಿಕೆಯಾಗದೇ ಇರುವುದು ಮತ್ತು ಹೆಸರು-ವಯಸ್ಸಿನಲ್ಲಿ ವ್ಯತ್ಯಾಸ ಸೇರಿದಂತೆ ಹಲವು ಕಾರಣಗಳಿಂದ ಸಿಬಲ್ ಹಾಗೂ ಅವರ ಪತ್ನಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಚುನಾವಣಾ ಆಯುಕ್ತ ಎಸ್.ಎಸ್. ಸಂಧು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೂ ನೋಟಿಸ್ ನೀಡಲಾಗಿದೆ.

