ಮಂಗಳೂರು: ಕರಾವಳಿ ಭಾಗದ ಬಹುವರ್ಷಗಳ ಬೇಡಿಕೆಯಾಗಿದ್ದ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಮಹತ್ವದ ನಿರ್ಣಯವನ್ನು ಮಂಗಳೂರಿನಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ತುಳು ಭಾಷೆ ರಾಜ್ಯ ಭಾಷೆ ಆಗಬೇಕು ಎಂದು ಎಲ್ಲರ ಬೇಡಿಕೆಯಾಗಿತ್ತು. ಭಾವನಾತ್ಮಕ ವಿಚಾರ, ತುಳುವಿನ ಭಾಷೆ ವಿಚಾರ, ಟೀಕೆಗಳು ಬರಬಹುದು. ಟೀಕೆಗಳು ಸಾಯುತ್ತವೆ. ಕೆಲಸ ಉಳಿಯಲಿದೆ ಎಂಬ ದೃಷ್ಟಿಯಲ್ಲಿ ನಾವು ಕೆಲಸ ಮಾಡುವುದು ಎಂದು ಅವರು ಹೇಳಿದರು.
ನಾವು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ. ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಆ ದೃಷ್ಟಿಯಿಂದ ಏನೇ ತೀರ್ಮಾನ ಮಾಡಿದರೂ ಬದುಕನ್ನು ಮುಂದಿಟ್ಟು ಅನೇಕ ತೀರ್ಮಾನ ಮಾಡಿದ್ದೇವೆ. ದ.ಕ ಜಿಲ್ಲೆಯನ್ನು ಮಂಗಳೂರು ಜಿಲ್ಲೆಯಾಗಿ ಘೋಷಿಸುವ ವಿಚಾರ ಸಂಪ್ರದಾಯ, ಆಚಾರ ವಿಚಾರ ಗಣನೆಯಲ್ಲಿ ಇಟ್ಟುಕೊಂಡು ಒಂದು ತಿಂಗಳ ಅವಧಿಯಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಕರಡು ಅಧಿಸೂಚನೆ ಹೊರಡಿಸ ಲಾಗುವುದು. ಇಡೀ ರಾಷ್ಟ್ರದಲ್ಲಿ ಮಂಗಳೂರು ಖ್ಯಾತಿ ಹೊಂದಿದೆ. ಅದಕ್ಕೆ ಭಾವನಾತ್ಮಕ ಸಂಬಂಧ ಇದೆ. ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಅಗತ್ಯ ಎಂಬ ನೆಲೆಯಲ್ಲಿ ಈ ಕ್ರಮ ಆಗಿದೆ ಎಂದು ಹೇಳಿದರು.
ಕೆಲವೊಂದು ವಿಚಾರ, ಬೇಡಿಕೆಗಳನ್ನು ಆರ್ಥಿಕ, ಕಾನೂನು ಚೌಕಟ್ಟಿನ ಮೇರೆಗೆ ತೀರ್ಮಾನಕ್ಕೆ ಬರಲಾಗುವುದು. ಪ್ರವಾಸೋದ್ಯಮಕ್ಕೆ ಮಲೆನಾಡು ಮತ್ತು ಕರಾವಳಿ ಸೇರಿದಂತೆ ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ನೀತಿಗೆ ನಿರ್ಧಾರ ಮಾಡಲಾಗಿದೆ. ಮೀನುಗಾರಿಕೆ, ಮರೈನ್ ಬ್ಲೂ ಎಕಾನಮಿ, ಯುನಿವರ್ಸಿಟಿ ಘೋಷಣೆ ಮಾಡುತ್ತಿರುವುದಾಗಿ ಹೇಳಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಿದ್ವಾಯಿ ಹಾಗೂ ಜಯದೇವ್ ಆಸ್ಪತ್ರೆ ಘಟಕ ಸ್ಥಾಪನೆ ಬಗ್ಗೆಯೂ ಕ್ರಮ ಆಗಲಿದೆ ಎಂದರು.
ವಿಶೇಷವಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆದ್ಯತೆ ನೀಡುವ ಮೂಲಕ ಕರಾವಳಿಯ ಪ್ರವಾಸಿ ತಾಣಗಳ ಅಭಿವೃದ್ಧಿ, ಹೂಡಿಕೆ ಆಕರ್ಷಣೆ ಹಾಗೂ ಪ್ರವಾಸೋದ್ಯಮ ಮೂಲಸೌಕರ್ಯ ಬಲವರ್ಧನೆಗೆ ಒತ್ತು ನೀಡಲಾಗಿದೆ ಎಂದರು.
ಸಭೆಯ ಬಳಿಕ ಸುದ್ದಿಗಾರರಿಗೆ ಸಚಿವ ಸಂಪುಟದ ನಿರ್ಣಯಗಳ ಕುರಿತು ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕರಾವಳಿ ಭಾಗದ ಅಭಿವೃದ್ಧಿಗೆ ಪೂರಕವಾದ ಮಹತ್ವದ ತೀರ್ಮಾನಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗೋಷ್ಟಿಯಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ , ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷಾದ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು.
ಮೊದಲ ಸಚಿವ ಸಂಪುಟ ಸಭೆ ಬೆಂಗಳೂರಿಂದ ಹೊರಗೆ ನಡೆಸಲಾಗಿದೆ. ಕರಾವಳಿ ಜಿಲ್ಲೆಗಳ ಜನ ತೋರಿಸಿದ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕರಾವಳಿ ಅಭಿವೃದ್ಧಿಗೆ 32,611 ಕೋಟಿ ರೂ. ಮೊತ್ತದ ಯೋಜನೆಗಳಲ್ಲಿ 16,000 ಕೋಟಿ ರೂ. ರಸ್ತೆಗಳ ಅಭಿವೃದ್ಧಿಗೆ ನೀಡಲಾಗುತ್ತಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದರು.



