ಶಿಸ್ತುಬದ್ಧ ಜೀವನಕ್ರಮ, ಸ್ವಚ್ಛತೆ, ಜೀವನಶೈಲಿಯಿಂದಲೇ ಜಗತ್ತಿನ ಗಮನ ಸೆಳೆಯುವ ಜಪಾನ್‌ನಲ್ಲಿ ಶತಾಯುಷಿಗಳ ಸಂಖ್ಯೆ ಈಗ ಒಂದು ಲಕ್ಷ ದಾಟಿದೆ.
ಹೌದು, ಜಪಾನ್ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಇಲಾಖೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಜಪಾನ್‌ನಲ್ಲಿ 100 ವರ್ಷ ಆಗಿರುವವರು ಮತ್ತು 100 ವರ್ಷ ದಾಟಿದವರ ಸಂಖ್ಯೆ ಈ ವರ್ಷ 1,07,677ಕ್ಕೆ ಏರಿಕೆಯಾಗಿದೆ.
2025ರಲ್ಲಿದ್ದ ಸಂಖ್ಯೆಗಿಂತ 7,914ರಷ್ಟು ಹೆಚ್ಚಳವಾಗಿದ್ದು, ಸತತ 56ನೇ ವಾರ್ಷಿಕ ಏರಿಕೆಯಾಗಿದೆ. ಒಟ್ಟು ಸಂಖ್ಯೆಯಲ್ಲಿ ಮಹಿಳೆಯರು ಸುಮಾರು ಶೇ 88ರಷ್ಟು ಪಾಲನ್ನು ಹೊಂದಿದ್ದಾರೆ.
ತೀವ್ರ ಕುಸಿತ
ಈ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಜಪಾನ್ ಆರೋಗ್ಯ ಸಚಿವ ಕೆನಿಚಿರೊ ಯುನೊ, 'ಅನೇಕ ಜನರು ದೀರ್ಘಕಾಲ, ಆರೋಗ್ಯಕರ ಮತ್ತು ಸಕ್ರಿಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಸಂತೋಷವಾಗಿದೆ. ಇದಕ್ಕೆ ವೈದ್ಯಕೀಯ ತಂತ್ರಜ್ಞಾನದಲ್ಲಿನ ಪ್ರಗತಿ ಹಾಗೂ ಆರೋಗ್ಯಕರ ಜೀವನಶೈಲಿಯೇ ಕಾರಣ' ಎಂದು ಉಲ್ಲೇಖಿಸಿದ್ದಾರೆ.
ಜಪಾನ್‌ನಲ್ಲಿ ದೀರ್ಘಾಯುಷಿಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆ, ಹುಟ್ಟುವ ಮಕ್ಕಳ ಸಂಖ್ಯೆ ಸಾರ್ವಕಾಲಿಕ ಕುಸಿತ ಕಂಡಿದೆ ಎನ್ನುವುದು ಕಳವಳ ಹುಟ್ಟಿಸಿದೆ. ಇದರಿಂದಾಗಿ, ಪಿಂಚಣಿ, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಆರೈಕೆಯ ಕಾರಣಕ್ಕೆ ವೆಚ್ಚ ಹೆಚ್ಚುತ್ತಿದೆ. ಇದನ್ನು ಭರಿಸುವ ಹೊಣೆ ಉದ್ಯೋಗಿ ವರ್ಗದ ಮೇಲೆ ಬೀಳುತ್ತಿದೆ.
ವಯಸ್ಸಾದವರೇ ಹೆಚ್ಚು
ಜಪಾನ್ ನಿವಾಸಿಗಳ ಪೈಕಿ 10ರಲ್ಲಿ ಮೂವರು 65 ವರ್ಷ ಮತ್ತು ಅದರ ಮೇಲ್ಪಟ್ಟವರಿದ್ದಾರೆ. ಇದರ ಸಂಖ್ಯೆ 2070ಕ್ಕೆ ಶೇ 40ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಸರ್ಕಾರದ ಅಂಕಿ- ಅಂಶಗಳ ಪ್ರಕಾರ ಕಳೆದ ವರ್ಷ, 8 ಲಕ್ಷ ಜನರು 95 ವರ್ಷ ಮತ್ತು ಮೇಲ್ಪಟ್ಟವರಾಗಿದ್ದಾರೆ ಎನ್ನುವುದು ತಿಳಿದುಬಂದಿದೆ. ಅದೇ ವೇಳೆ ಕೇವಲ 7 ಲಕ್ಷ ಶಿಶು ಜನನವಾಗಿದೆ.
ಜಪಾನ್‌ನಲ್ಲಿಹಿರಿಯರ ಸಂಖ್ಯೆ ಏರಿಕೆಗೆ ಕಾರಣವೇನು?
ಜಪಾನ್‌ನ ಜನರು ಇದೊಂದೇ ಕಾರಣದಿಂದ ದೀರ್ಘಕಾಲ ಬದುಕುತ್ತಾರೆ ಎನ್ನಲು ಸಾಧ್ಯವಿಲ್ಲ. ಮುಖ್ಯವಾಗಿ ಆಹಾರ ಪದ್ಧತಿ, ಚಟುವಟಿಕೆ, ಆರೋಗ್ಯದ ಬಗೆಗಿನ ಕಾಳಜಿಯೇ ದೀರ್ಘಾಯುಷ್ಯದ ಗುಟ್ಟು ಎನ್ನಬಹುದು.
ಜಪಾನಿಗರ ಆಹಾರ ಕ್ರಮದಲ್ಲಿ ಮುಖ್ಯವಾಗಿ ಮೀನು, ತರಕಾರಿ, ಅನ್ನ, ಕಡಿಮೆ ಕೊಬ್ಬಿನಾಂಶ ಒಳಗೊಂಡಿರುತ್ತದೆ. ಹೀಗಾಗಿ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಜಪಾನಿಗರಿಗೆ ಬೊಜ್ಜಿನ ಸಮಸ್ಯೆಯ ಪ್ರಮಾಣ ಕಡಿಮೆ.

ನಿತ್ಯದ ಚಟುವಟಿಕೆಗಳಿಗೆ ನಡಿಗೆ, ಸೈಕಲ್ ಅನ್ನೇ ಅವಲಂಬಿಸುತ್ತಾರೆ. ವಯಸ್ಸಾದವರಿಂದ ಹಿಡಿದು ಬಹುತೇಕರು ಇಲ್ಲಿ ಸಾರ್ವಜನಿಕ ವಾಹನಗಳನ್ನೇ ಬಳಸುತ್ತಾರೆ. ಅಲ್ಲದೇ, ಗುಂಪಿನಲ್ಲಿ ವ್ಯಾಯಾಮ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಜಪಾನಿಗರ ಅಭ್ಯಾಸ.
ಜಪಾನಿಗರ ಸಾರ್ವತ್ರಿಕ ಆರೋಗ್ಯ ವಿಮಾ ವ್ಯವಸ್ಥೆಯು, ಅಮೆರಿಕದಂತಹ ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಮತ್ತು ಔಷಧಿಗಳನ್ನು ಪಡೆಯುವ ಅವಕಾಶ ಕಲ್ಪಿಸುತ್ತದೆ.
ಜನಸಂಖ್ಯೆ ಕುಸಿತ
ದೀರ್ಘಾಯುಷಿಗಳ ಸಂಖ್ಯೆ ಹೆಚ್ಚಿದೆ ಎನ್ನುವ ವಿಚಾರದ ನಡುವೆ ಜನಸಂಖ್ಯೆ ಕುಸಿತ ಕಳವಳ ಸೃಷ್ಟಿಸಿದೆ. ಪ್ರಾಥಮಿಕ ಜನಗಣತಿಯ ಅಂಕಿ-ಅಂಶಗಳ ಪ್ರಕಾರ, 2025ರಲ್ಲಿ ಜಪಾನ್‌ನ 47 ಪ್ರಾಂತ್ಯಗಳ ಪೈಕಿ 45ರಲ್ಲಿ ಜನಸಂಖ್ಯೆಯು ಐದು ವರ್ಷಗಳ ಹಿಂದಿನ ಅವಧಿಗಿಂತ ಕಡಿಮೆಯಾಗಿದೆ. ಕೇವಲ ಟೋಕಿಯೋ ಮತ್ತು ಒಕಿನಾವಾ ಪ್ರಾಂತ್ಯಗಳಲ್ಲಿ ಮಾತ್ರ ಜನಸಂಖ್ಯೆ ಏರಿಕೆಯಾಗಿದೆ.
2008ರಲ್ಲಿ ಜಪಾನ್‌ನ ಜನಸಂಖ್ಯೆಯು ಸುಮಾರು 12.8 ಕೋಟಿಗೆ ತಲುಪಿತ್ತು. ಆದರೆ, 'ರಾಷ್ಟ್ರೀಯ ಜನಸಂಖ್ಯೆ ಮತ್ತು ಸಾಮಾಜಿಕ ಭದ್ರತಾ ಸಂಶೋಧನಾ ಸಂಸ್ಥೆ'ಯ ಅಂದಾಜಿನ ಪ್ರಕಾರ, 2070ರ ವೇಳೆಗೆ ಈ ಸಂಖ್ಯೆಯು 8.7 ಕೋಟಿಗೆ ಕುಸಿಯಲಿದೆ. ಅಂದರೆ ಸುಮಾರು ಶೇ 30ರಷ್ಟು ಇಳಿಕೆಯಾಗಲಿದೆ.
ದೀರ್ಘಾಯುಷ್ಯ ಜಪಾನ್‌ಗೆ ತೊಂದರೆಯೇ?
ಆರೋಗ್ಯಯುತವಾಗಿ ದೀರ್ಘಕಾಲ ಬದುಕುವುದೆಂದರೆ ವರವೇ ಸರಿ. ಆದರೆ, ಜಪಾನ್‌ನಲ್ಲಿ ಜನನ ಪ್ರಮಾಣ ಕುಸಿತ ಸಮಸ್ಯೆಯಾಗಿ ಕಾಡುತ್ತಿದೆ.
ಒಬ್ಬ ಮಹಿಳೆಯು ತನ್ನ ಜೀವಿತಾವಧಿಯಲ್ಲಿ ಪಡೆಯಬಹುದಾದ ಮಕ್ಕಳ ದರ 2025ರ ವೇಳೆಗೆ 1.14ಕ್ಕೆ ಕುಸಿದಿದೆ. ಜನಸಂಖ್ಯೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಫಲವತ್ತತೆ ದರವು 2.1ರಷ್ಟು ಇರುವುದು ಅಗತ್ಯ ಎಂದು ಪರಿಗಣಿಸಲಾಗುತ್ತದೆ.
ವಯಸ್ಸಾದವರ ಸಂಖ್ಯೆ ಹೆಚ್ಚಿದಂತೆ, ಅವರನ್ನು ನೋಡಿಕೊಳ್ಳುವ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜವಾಬ್ದಾರಿ ಯುವಜನತೆಯ ಮೇಲೆ ಬೀಳುತ್ತದೆ. ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಅವರ ದುಡಿಮೆಯ ಸಮಯವನ್ನೂ ಹೆಚ್ಚಿಸಬೇಕಾದ ಅನಿವಾರ್ಯತೆಯಿರುತ್ತದೆ.

ಉದ್ಯೋಗಸ್ಥರು ಮಕ್ಕಳನ್ನು ಪಡೆಯಬೇಕು ಎನ್ನುವ ಕಾರಣಕ್ಕೇ ಸರ್ಕಾರ, ಭತ್ಯೆ ನೀತಿ, ಶಿಶುಪಾಲನೆಗೆ ಸಬ್ಸಿಡಿ, ಪೋಷಕರ ರಜೆ ನೀತಿಯಲ್ಲಿ ಬದಲಾವಣೆ ಸೇರಿದಂತೆ ಮಕ್ಕಳನ್ನು ಪಡೆಯುವ ದಂಪತಿಗೆ ವಿವಿಧ ರೀತಿಯ ಯೋಜನೆಗಳನ್ನು ಪರಿಚಯಿಸಿದೆ. ಅದಾಗ್ಯೂ, ಜನನ ಪ್ರಮಾಣದಲ್ಲಿ ಚೇತರಿಕೆಯಾಗಿಲ್ಲ ಎನ್ನುತ್ತದೆ 'ಅಲ್ ಜಝೀರಾ' ಸುದ್ದಿ ಸಂಸ್ಥೆ ವರದಿ.
ಜನನ ಪ್ರಮಾಣ ಕುಸಿತಕ್ಕೆ ಇನ್ನೊಂದು ಕಾರಣವೆಂದರೆ, ಮಕ್ಕಳನ್ನು ಪಡೆಯುವ ಸಾಧ್ಯತೆ ಕಡಿಮೆಯಾಗುವ ವಯಸ್ಸಿನಲ್ಲಿ ಮದುವೆಯಾಗುವುದು. ಅಲ್ಲದೇ ಬಹುತೇಕ ಯುವ ಜನರಿಗೆ ಕಾಡುತ್ತಿರುವ ಉದ್ಯೋಗದಲ್ಲಿನ ಅಭದ್ರತೆ, ಕಡಿಮೆ ವೇತನ ಮತ್ತು ಕಠಿಣ ಕೆಲಸದ ಅವಧಿಗಳು. ಇದರಿಂದಾಗಿ ಕುಟುಂಬವನ್ನು ನಿರ್ವಹಿಸುವುದು ಕಷ್ಟ ಎನ್ನುವುದು ಇಲ್ಲಿನ ಯುವ ಜನರ ಅಭಿಪ್ರಾಯ.
ಈ ಬಗ್ಗೆ ಪ್ರಧಾನಿ ತಕೈಚಿ ಕೂಡ ಕಳವಳ ವ್ಯಕ್ತಪಡಿಸಿ, ಜನಸಂಖ್ಯೆ ಇಳಿಕೆ ಮತ್ತು ಜನನ ಪ್ರಮಾಣ ಕುಸಿತ, ರಾಷ್ಟ್ರೀಯ ಸವಾಲುಗಳಲ್ಲಿ ಪ್ರಮುಖವಾದವು ಎಂದಿದ್ದರು. ಅಲ್ಲದೆ, ಇದು ದೇಶದ ಆರ್ಥಿಕ ಮತ್ತು ಸಾಮಾಜಿಕ ಅಡಿಪಾಯಕ್ಕೆ ಅಪಾಯ ತರಬಲ್ಲದು ಎಂದು ಜಪಾನ್ ಅಧಿಕಾರಿಗಳೂ ಎಚ್ಚರಿಸಿದ್ದಾರೆ.

