HEALTH TIPS

ಬಾಲಕಿಯನ್ನು ಮುಸ್ಲಿಂ ಕಾನೂನಿನಡಿ ಮದುವೆಯಾದರೂ ಪೋಕ್ಸೊ ಅನ್ವಯ: ಹೈಕೋರ್ಟ್

ಕೊಚ್ಚಿ: ಮುಸ್ಲಿಂ ಧರ್ಮ ಸಂಹಿತೆಯಡಿ ವಿಧಿವತ್ತಾಗಿ ಮದುವೆಯಾಗಿದ್ದರೂ, ಪೋಕ್ಸೊ ಕಾಯ್ದೆಯಡಿ ಕ್ರಿಮಿನಲ್ ಹೊಣೆಗಾರಿಕೆಯಿಂದ ತ‍ಪ್ಪಿಸಿಕೊಳ್ಳಲಾಗದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 17 ವರ್ಷದ ಬಾಲಕಿಯ ಮೇಲೆ ಸತತ ಅತ್ಯಾಚಾರ ಎಸಗಿದ ಆರೋಪದಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಕೇರಳ ಹೈಕೋರ್ಟ್ ನಿರಾಕರಿಸಿದೆ.


ಮಣ್ಣಾರ್‌ಕಾಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡಲು ನ್ಯಾಯಮೂರ್ತಿ ಜೊಬಿನ್ ಸೆಬಾಸ್ಟಿಯನ್ ನೇತೃತ್ವದ ಪೀಠ ನಿರಾಕರಿಸಿದೆ. ‍ಪ್ರಕರಣ ಪಟ್ಟಾಂಬಿಯ ತ್ವರಿತಗತಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

18 ವರ್ಷದ ಕೆಳಗಿನ ಬಾಲಕಿಯೊಂದಿಗೆ ವ್ಯಕ್ತಿಯೊಬ್ಬ ಲೈಂಗಿಕ ಸಂಬಂಧ ಬೆಳೆಸಿದರೆ, ಆಕೆ ಆತನ ಮಡದಿಯಾಗಿದ್ದರೂ ಅದನ್ನು ಐಪಿಸಿಯ ಸೆಕ್ಷನ್ 376ರಡಿ ಅತ್ಯಾಚಾರ ಎಂದೇ ಪರಿಗಣಿಸಲಾಗುವುದು ಎಂದು ಕೋರ್ಟ್ ಹೇಳಿದೆ.

ಹೀಗಾಗಿ ಹಾಲಿ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 375ರ ವಿನಾಯಿತಿ 2ರಡಿ ಆರೋಪಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಗಸ್ಟ್ 19ರಂದು ನೀಡಿದ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಸಂತ್ರಸ್ತೆಗೆ 17 ವರ್ಷ 1 ತಿಂಗಳು ವಯಸ್ಸಾಗಿದ್ದಾಗ, ಆಕೆಯನ್ನು ಇಸ್ಲಾಮಿನ ಧರ್ಮ ಶಾಸ್ತ್ರ ಹಾಗೂ ಆಚರಣೆ ಪ್ರಕಾರ ಮದುವೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಆರೋಪವನ್ನು ಅನೂರ್ಜಿತಗೊಳಿಸಬೇಕು ಎನ್ನುವ ಆರೋಪಿ ಪ‍ರ ವಕೀಲರ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಕೋರ್ಟ್, 'ಯಾವುದೇ ವೈಯಕ್ತಿಕ ಕಾನೂನಿನಡಿಯಾದರೂ, ಅಪ್ರಾಪ್ತ ವಯಸ್ಸಿನವರನ್ನು ಮದುವೆಯಾದರೆ ಪೋಕ್ಸೊ ಕಾಯ್ದೆ ಅನ್ವಯವಾಗುತ್ತದೆ' ಎಂದು ಕೋರ್ಟ್ ಹೇಳಿದೆ.

ವೈವಾಹಿಕ ಸಂಬಂಧ ಇದೆ ಎಂದ ಮಾತ್ರಕ್ಕೆ ಆರೋಪಿಯು ಪ್ರಾಸಿಕ್ಯೂಷನ್‌ನಿಂದ ತಪ್ಪಿಸಿಕೊಳ್ಳಲಾಗದು ಎಂದಿದೆ.

ಮುಸ್ಲಿಂ ಧರ್ಮಶಾಸ್ತ್ರ ಹಾಗೂ ಆಚರಣೆ ಪ್ರಕಾರ ಮದುವೆಯಾಗಿದೆ ಎಂದು ತರ್ಕಿಸಿದರೂ, ಆರೋಪಿಯು ಕ್ರಿಮಿನಲ್ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು. ಅದರಲ್ಲೂ, ವಿವಾಹ ಹಾಗೂ ನಂತರದ ಲೈಂಗಿಕ ಕ್ರಿಯೆಗಳು ನಡೆದ ಸಂದರ್ಭದಲ್ಲಿ ಬಾಲಕಿಗೆ 17 ವರ್ಷ ವಯಸ್ಸಾಗಿತ್ತು ಎಂದು ನ್ಯಾಯಾಲಯ ಹೇಳಿದೆ.

'ನಿಸ್ಸಂದೇಹವಾಗಿ, ಮದುವೆಯಾದ ಪೈಕಿ ಒಬ್ಬರು ಅ‍ಪ್ರಾಪ್ತ ವಯಸ್ಸಿನವರಾದರೂ ಪೋಕ್ಸೊ ಕಾಯ್ದೆ ಅನ್ವಯವಾಗುತ್ತದೆ. ಮದುವೆ ಸಿಂಧುವಾಗಿದ್ದರೂ, ಅಥವಾ ವೈಯಕ್ತಿಕ ಕಾನೂನಿನಡಿ ಮದುವೆಯಾದರೂ ಇದು ಅನ್ವಯ' ಎಂದು ಕೋರ್ಟ್ ಹೇಳಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್‌) ಸೆಕ್ಷನ್ 528ರಡಿ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಮಾಡಬೇಕು ಎಂದು ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದರು.

ಪ್ರಕರಣವೇನು?

2021ರ ಅಕ್ಟೋಬರ್‌ 23ರಂದು ಆರೋಪಿಯು ಸಂತ್ರಸ್ತೆಯನ್ನು ಕಾರಿನಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿ ಸತತವಾಗಿ ಅತ್ಯಾಚಾರ ಎಸಗಿದ್ದಾರೆ. ಅಕ್ಟೋಬರ್ 23ರಿಂದ 26ರವರೆಗೆ ಘಟನೆ ನಡೆದಿದೆ. ಇನ್ನಿಬ್ಬರು ಆತನಿಗೆ ಸಹಾಯ ಮಾಡಿದ್ದರು ಎಂದು ಪ್ರಾಸಿಕ್ಯೂಷನ್ ಹೇಳಿದೆ. ಮೊದಲನೇ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ.

ಆರೋಪಿ ಕಾರಿನಲ್ಲಿ ಬಂದು ಬಟ್ಟೆ ಕೊಡಿಸುವುದಾಗಿ ಹೇಳಿ ಬಾಲಕಿಯನ್ನು ತೊಟ್ಟಾರದಲ್ಲಿರುವ ತನ್ನ ಮನೆಗೆ ಕರೆದೊಯ್ದಿದ್ದಾನೆ. ಬಳಿಕ ಆಕೆಯನ್ನು ತನ್ನ ಮನೆಯ ಮಲಗುವ ಕೋಣೆಯಲ್ಲಿ ಇರಿಸಲಾಗಿತ್ತು. ಕೋಣೆಯ ಬಾಗಿಲನ್ನು ಹೊರಗಿನಿಂದ ಬೀಗ ಹಾಕಲಾಗಿತ್ತು ಎಂದು ಆರೋಪಿಸಲಾಗಿದೆ.

ಅಕ್ಟೋಬರ್ 23ರ ರಾತ್ರಿ ಆರೋಪಿ ತನ್ನ ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ನಂತರದ ನಾಲ್ಕು ದಿನಗಳಲ್ಲೂ ಕೃತ್ಯ ಪುನರಾವರ್ತನೆಯಾಗಿದೆ ಎಂದು ಆಕೆ ಆರೋಪಿಸಿದ್ದಾಳೆ.

ಈ ಆರೋಪಗಳ ಸತ್ಯಾಸತ್ಯತೆಯನ್ನು ಸಂಪೂರ್ಣ ವಿಚಾರಣೆಯ ಬಳಿಕವಷ್ಟೇ ನಿರ್ಧರಿಸಬಹುದು. ಆದರೆ, ಮೇಲ್ನೋಟಕ್ಕೆ ಆರೋಪಿತ ಅಪರಾಧಗಳು ನಡೆದಿರುವುದನ್ನು ಆರೋಪಗಳು ಬಹಿರಂಗಪಡಿಸುತ್ತವೆ ಎಂದು ನ್ಯಾಯಾಲಯ ಹೇಳಿತು.

ವಾದ-‍ಪ್ರತಿವಾದ ಹೇಗಿತ್ತು?

ಆಕೆಯ ಮೇಲೆ ಮೊದಲನೇ ಆರೋಪಿ ಅತ್ಯಾಚಾರ ಎಸಗಿದ್ದ ಬಗ್ಗೆ ಆಕೆಯ ಪೋಷಕರಿಗೆ ಅರಿವಿದ್ದರೂ, ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿಲ್ಲ ಎನ್ನುವುದನ್ನೂ ಕೋರ್ಟ್ ಗಮನಿಸಿತು.

ಐಪಿಸಿ ಸೆಕ್ಷನ್ 375 ಅಡಿ ಇರುವ 2ನೇ ವಿನಾಯಿತಿಯನ್ನು ಉಲ್ಲೇಖಿಸಿದ ಅರೋಪಿ ಪರ ವಕೀಲ, 15 ವರ್ಷಕ್ಕಿಂತ ಕಿರಿಯಳಲ್ಲದ ಮಡದಿಯೊಂದಿಗೆ ದೈಹಿಕ ಸಂಪರ್ಕ ನಡೆಸುವುದು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿ, ಪ್ರಕರಣ ರದ್ದು ಮಾಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್, 'ಬಾಲಕಿಯ ವಯಸ್ಸು 18ವರ್ಷಕ್ಕಿಂತ ಕಡಿಮೆಯಾಗಿರುವುದರಿಂದ ಪೋಕ್ಸೊ ಕಾಯ್ದೆಯಡಿ ಸಂತ್ರಸ್ತೆಯನ್ನು 'ಅಪ್ರಾಪ್ತ ವಯಸ್ಸಿನವಳು' ಎಂದೇ ಪರಿಗಣಿಸಬೇಕಾಗುತ್ತದೆ. ಹೀಗಾಗಿ ವಿವಾಹವಾಗಿದ್ದರೂ ಆಕೆಯೊಂದಿಗಿನ ದೈಹಿಕ ಸಂಪರ್ಕ ಪೋಕ್ಸೊ ಕಾಯ್ದೆಯಡಿ ಅತ್ಯಾಚಾರ ಎಂದೇ ಪರಿಗಣಿತವಾಗುತ್ತದೆ' ಎಂದು ಹೇಳಿತು.

ವಿವಾಹ ಸಿಂಧುವೇ?

ಬಾಲಕಿ ತನ್ನ ಕಾನೂನುಬದ್ಧ ಪತ್ನಿ ಎಂಬ ಆರೋಪಿಯ ವಾದವನ್ನೂ ನ್ಯಾಯಾಲಯ ತಿರಸ್ಕರಿಸಲಿಲ್ಲ. ಇದನ್ನು ಬಾಲಕಿ, ಆಕೆಯ ಸಹೋದರ ಮತ್ತು ವಿವಾಹ ನಡೆದಿತ್ತೆಂದು ಹೇಳಲಾದ ಮಸೀದಿಯ ಖಾಜಿ ಪೊಲೀಸರಿಗೆ ನೀಡಿದ ಹೇಳಿಕೆಗಳನ್ನು ಆಧರಿಸಿ ತೀರ್ಮಾನಿಸಬೇಕು ಎಂದು ನ್ಯಾಯಾಲಯ ಹೇಳಿತು. ಆದರೆ, ವಿವಾಹ ನಿಜವಾಗಿಯೂ ನಡೆದಿತ್ತೇ ಎಂಬುದನ್ನು ವಿಚಾರಣೆಯ ಬಳಿಕವಷ್ಟೇ ನಿರ್ಧರಿಸಬಹುದು. ಅಂತಹ ವಿವಾಹ ನೆರವೇರಿರುವುದಕ್ಕೆ ಯಾವುದೇ ಸಾಕ್ಷ್ಯವೂ ಇಲ್ಲ ಎಂದು ನ್ಯಾಯಾಲಯ ಹೇಳಿತು.

ಪೋಕ್ಸೊ ಕಾಯ್ದೆಯ ಸೆಕ್ಷನ್ 2(1)(ಡಿ)ರ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿ 'ಮಗು' ಎಂಬ ವ್ಯಾಖ್ಯಾನಕ್ಕೆ ಒಳಪಡುತ್ತಾರೆ. ಇತರ ಯಾವುದೇ ಕಾನೂನು ಇದ್ದರೂ, ಪೋಕ್ಸೊ ಕಾಯ್ದೆಯ ನಿಬಂಧನೆಗಳೇ ಅನ್ವಯವಾಗುತ್ತವೆ ಎನ್ನುವ ಸೆಕ್ಷನ್ 42ಎಯನ್ನೂ ನ್ಯಾಯಾಲಯ ಉಲ್ಲೇಖಿಸಿತು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಪೋಕ್ಸೊ ಕಾಯ್ದೆಯಡಿ ಅಪರಾಧ. ಇಂತಹ ಸಂದರ್ಭದಲ್ಲಿ ಆಕೆ ಆರೋಪಿಯ ಪತ್ನಿಯಾಗಿದ್ದಾಳೆಯೇ ಇಲ್ಲವೇ ಎಂಬುದಕ್ಕೆ ಹೆಚ್ಚಿನ ಮಹತ್ವ ಇಲ್ಲ ಎಂದು ಕೋರ್ಟ್ ಹೇಳಿತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries