HEALTH TIPS

'ಸಾರ್ವಜನಿಕ ಸ್ಥಳಗಳನ್ನು ಅಪಾಯದ ವಲಯಗಳಾಗಿ ಪರಿವರ್ತಿಸಲು ಸಾಧ್ಯವಿಲ್ಲ': ಕಲ್ಕಾಜಿ ಸೇರಿ ಇತ್ತೀಚಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ

ನವದೆಹಲಿ: ಉದ್ಯಾನವನಗಳು, ಬಸ್‌ಗಳು ಹಾಗೂ ರಸ್ತೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು 'ಅತಿ ಅಪಾಯದ ವಲಯ'ಗಳನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. 


ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಅಪ್ರಾಪ್ತರು ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ಕುರಿತು ದಿಲ್ಲಿ ಪೊಲೀಸರಿಂದ ಪ್ರತಿಕ್ರಿಯೆ ಕೋರಿದೆ.

ವಿಚಾರಣೆ ವೇಳೆ ಪೀಠವು ಕಲ್ಕಾಜಿಯ ಲೇಡಿ ಶ್ರೀರಾಮ್ ಕಾಲೇಜು ಸಮೀಪದ ಆಸ್ಥಾ ಕುಂಜ್ ಉದ್ಯಾನವನದಲ್ಲಿ 17 ವರ್ಷದ ಬಾಲಕಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ, ಸ್ವರೂಪ್ ನಗರದಲ್ಲಿ ಅಪ್ರಾಪ್ತೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಗ್ರೇಟರ್ ನೋಯ್ಡಾದಿಂದ ದಿಲ್ಲಿಗೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಮತ್ತೊಬ್ಬ ಅಪ್ರಾಪ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವರದಿಗಳನ್ನು ಗಮನಕ್ಕೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

ಈ ಲೈಂಗಿಕ ದೌರ್ಜನ್ಯ ಘಟನೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಪೀಠ, 2012ರ ನಿರ್ಭಯಾ ಪ್ರಕರಣವನ್ನು ಉಲ್ಲೇಖಿಸಿದೆ. ಸಾರ್ವಜನಿಕ ಸುರಕ್ಷತೆಯ ಭರವಸೆ ಇದ್ದರೂ ದಿಲ್ಲಿಯಾದ್ಯಂತ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದನ್ನು ಗಮನಿಸಿದೆ.

"ಹಿಂಸೆಯಿಂದ ಮುಕ್ತವಾಗಿ ಗೌರವಯುತವಾಗಿ ಬದುಕುವ ಹಕ್ಕು ಸಂವಿಧಾನದ 21ನೇ ವಿಧಿಯಡಿ ಖಾತರಿಪಡಿಸಲಾಗಿರುವ ಮೂಲಭೂತ ಹಕ್ಕಾಗಿದೆ" ಎಂದು ಪೀಠವು ತಿಳಿಸಿದೆ.

ಉದ್ಯಾನವನ, ರಸ್ತೆ ಹಾಗೂ ಬಸ್‌ಗಳಲ್ಲಿ ಈ ಘಟನೆಗಳು ನಡೆದಿರುವುದನ್ನು ಗಮನಿಸಿದ ನ್ಯಾಯಾಲಯ, ಕಳಪೆ ಗಸ್ತು ವ್ಯವಸ್ಥೆ ಮತ್ತು ಕಣ್ಗಾವಲಿನ ಕೊರತೆಯಿಂದಾಗಿ ಉದ್ಯಾನವನಗಳು, ರಸ್ತೆಗಳು, ಬಸ್‌ಗಳು, ಮೆಟ್ರೊ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಅತಿ ಅಪಾಯದ ವಲಯಗಳನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಆಸ್ಥಾ ಕುಂಜ್ ಘಟನೆಗೆ ಸಂಬಂಧಿಸಿದ ಸುದ್ದಿಯನ್ನು ಗಮನಿಸಿದ ನ್ಯಾಯಾಲಯ, ಲೇಡಿ ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿನಿಯರು ಈ ಹಿಂದೆ ಲೈಂಗಿಕ ಕಿರುಕುಳದ ಘಟನೆಗಳ ಕುರಿತು ದೂರು ನೀಡಿದ್ದರೂ, ಅವುಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದನ್ನು ಗಮನಿಸಿತು. ಈ ಹಿನ್ನೆಲೆಯಲ್ಲಿ ಪೊಲೀಸರನ್ನು ಹೊಣೆಗಾರರನ್ನಾಗಿ ಮಾಡಿದ ನ್ಯಾಯಾಲಯ, ಸುಧಾರಿತ ಕಣ್ಗಾವಲು ವ್ಯವಸ್ಥೆಯ ಮೂಲಕ ಈ ದೂರುಗಳ ಆಧಾರದಲ್ಲಿ ಭದ್ರತಾ ಲೋಪಗಳನ್ನು ಸರಿಪಡಿಸಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿತು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries