HEALTH TIPS

CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗೆ 5 ಲಕ್ಷ ರೂ. ಬಾಂಡ್ ಸಲ್ಲಿಸಲು ನೋಟಿಸ್; ಅದೇ ದಿನ ವಾಪಸ್

 ನವದೆಹಲಿದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ನೀವು ಭಾಗವಹಿಸಿರುವುದರಿಂದ, ಮುಂದೆ ಶಾಂತಿ ಕಾಪಾಡುತ್ತೇನೆಂದು ಐದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಸಲ್ಲಿಸಬೇಕು ಎಂದು ಸೂಚಿಸಿ ಗ್ರೇಟರ್ ನೋಯ್ಡಾದ ಗೌತಮ್ ಬುದ್ಧ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರಿಗೆ ಜಿಲ್ಲಾಡಳಿತವು ಕಳೆದ ವಾರ ನೋಟಿಸ್ ಜಾರಿ ಮಾಡಿದೆ.

ಆದರೆ, ಬಳಿಕ ಅದೇ ದಿನ ನೋಟಿಸ್‌ಅನ್ನು ಹಿಂಪಡೆಯಲಾಗಿದೆ.


ವಿದ್ಯಾರ್ಥಿಯ ವಿರುದ್ಧ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ)ರ ನ್ಯಾಯಾಲಯದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್)ಯ ಪರಿಚ್ಛೇದ 126 ಮತ್ತು 135ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು. ವಿಚಾರಣಾ ಪ್ರಕ್ರಿಯೆಗಳು ಆರಂಭಗೊಂಡ ಬಳಿಕ, ಗ್ರೇಟರ್ ನೋಯ್ಡಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಸೆಪ್ಟೆಂಬರ್ 4 ರಂದು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಪರಿಚ್ಛೇದ 130 ರ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿದ್ದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿದ್ಯಾರ್ಥಿ ಅಕ್ಷತ್ ತ್ರಿಪಾಠಿ ರಾಜಕೀಯ ಪಕ್ಷವೊಂದು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ವಿಶ್ವವಿದ್ಯಾಲಯದ ಇತರ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ್ದಾರೆ ಹಾಗೂ ಸರಕಾರ ವಿರೋಧಿ ವ್ಯಾಖ್ಯಾನಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂಬುದಾಗಿ ಪೊಲೀಸರು ತಮ್ಮ ವರದಿಯಲ್ಲಿ ಆರೋಪಿಸಿದ್ದರು.

ಆರು ತಿಂಗಳ ಕಾಲ ಶಾಂತಿ ಕಾಪಾಡಲು 5 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಇಬ್ಬರ ಭದ್ರತಾ ಖಾತರಿಗಳನ್ನು ನೀಡುವಂತೆ ಏಕೆ ಆದೇಶಿಸಬಾರದು ಎನ್ನುವುದಕ್ಕೆ ಕಾರಣ ನೀಡುವಂತೆ ತ್ರಿಪಾಠಿಗೆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು. ಹಾಗೂ ಸೆಪ್ಟಂಬರ್ 5 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು.

ತ್ರಿಪಾಠಿಯ ಚಟುವಟಿಕೆಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಯಿತ್ತು ಎಂದು ಪೊಲೀಸರು ಆರೋಪಿಸಿದ್ದರು. ಆದರೆ, ಅದೇ ದಿನ ನೋಟಿಸ್ ಹಿಂಪಡೆಯಲಾಗಿದೆ ಎಂದು ಪೊಲೀಸರು ನಂತರ ಸ್ಪಷ್ಟಪಡಿಸಿದರು.

ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ: ವಿದ್ಯಾರ್ಥಿ

ವರದಿಯಲ್ಲಿನ ಆರೋಪಗಳನ್ನು ತ್ರಿಪಾಠಿ ನಿರಾಕರಿಸಿದ್ದು, ತಾನು ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಭಾಗವಹಿಸಿದ್ದೆ ಹಾಗೂ ಆ ಸಮಯದಲ್ಲಿ ಕಾಲೇಜಿಗೆ ಹಾಜರಾಗುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೂಲತಃ ಪ್ರಯಾಗ್‌ರಾಜ್‌ನವರಾದ ಅವರು ಪ್ರಸ್ತುತ ಗ್ರೇಟರ್ ನೋಯ್ಡಾದ ಇಕೋ-ಟೆಕ್-1 ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಜುಲೈ 20ರಂದು ನಡೆದ ಸಂಸತ್ ಪ್ರತಿಭಟನಾ ಮೆರವಣಿಗೆಯ ವೇಳೆ ಪೊಲೀಸರ ಲಾಠಿಚಾರ್ಜ್‌ನಿಂದ ನನಗೆ ಗಾಯವಾಗಿತ್ತು ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿ ಸುಪ್ರೀಂ ಕೋರ್ಟ್ ಆದೇಶವನ್ನು ಓದಿಲ್ಲವೇ? : ಸಿಜೆಪಿ

ತ್ರಿಪಾಠಿಗೆ ನೋಟಿಸ್ ಜಾರಿ ಮಾಡಿರುವ ವರದಿಗಳಿಗೆ ಕಟುವಾಗಿ ಪ್ರತಿಕ್ರಿಯಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಜಂತರ್ ಮಂತರ್ ಪ್ರತಿಭಟನಾಕಾರರಿಗೆ ಕಾನೂನು ರಕ್ಷಣೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿ ಮೇಧಾ ರೂಪಂ ಓದಿದ್ದಾರೆಯೇ ಎಂದು ಪ್ರಶ್ನಿಸಿದೆ.

''ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿ ಸುಪ್ರೀಂ ಕೋರ್ಟ್‌ನ ಸೆಪ್ಟೆಂಬರ್ 1ರ ಐತಿಹಾಸಿಕ ಆದೇಶವನ್ನು ಓದಿಲ್ಲವೇ? ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲ್ಲಾ ಪ್ರತಿಭಟನಾಕಾರರಿಗೂ ಯಾವುದೇ ಕಾನೂನು ಕ್ರಮದಿಂದ ಶಾಶ್ವತ ಪೂರ್ಣ ರಕ್ಷಣೆ ಇದೆ. ಅಕ್ಷತ್ ತ್ರಿಪಾಠಿ ರೂ. 5 ಲಕ್ಷದ ಜಾಮೀನು ಬಾಂಡ್ ನೀಡುವ ಅಗತ್ಯವಿಲ್ಲ'' ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಎಕ್ಸ್‌ನಲ್ಲಿ ಹಾಕಿದ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅಧಿಕಾರಿಗಳ ಈ ಕ್ರಮವನ್ನು ವಿದ್ಯಾರ್ಥಿ ಸಂಘಟನೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಕೂಡಾ ತೀವ್ರವಾಗಿ ಖಂಡಿಸಿದ್ದು, ಇದೊಂದು ದಮನಕಾರಿ ಕ್ರಮ ಎಂದು ಕರೆದಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries