ಕಣ್ಣೂರು: ಪಯ್ಯನ್ನೂರು ಸಮೀಪದ ಏಳಿಮಲೆಯಲ್ಲಿರುವ ಭಾರತೀಯ ನೌಕಾ ಅಕಾಡೆಮಿ (INA)ಯಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶಿ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ. ಇದರೊಂದಿಗೆ ಕಳೆದ ನಾಲ್ಕು ದಿನಗಳಲ್ಲಿ ಕಣ್ಣೂರಿನಲ್ಲಿ ಬಂಧಿತರಾದ ಬಾಂಗ್ಲಾದೇಶಿ ಪ್ರಜೆಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಕಣ್ಣೂರು ಪೊಲೀಸ್ ಅಧಿಕಾರಿ ಉಮೇಶ್ ಗೋಯಲ್ ಅವರು ಮಾಹಿತಿ ನೀಡಿ, ಆರೋಪಿ 32 ವರ್ಷದ ವಿಪ್ಲವ್ ಸೊರೇನ್ ಸುಮಾರು ಒಂದು ವರ್ಷದಿಂದ ನೌಕಾ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.
ಪಯ್ಯನ್ನೂರು ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಕೆ. ನಾಯರ್ ಅವರ ಸೂಚನೆ ಮೇರೆಗೆ ಪಯ್ಯನ್ನೂರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶುಹೈಬ್ ಅವರು ಸೊರೇನ್‌ನನ್ನು ಅಕಾಡೆಮಿಯಿಂದ ಬಂಧಿಸಿದ್ದಾರೆ.
''ವಿಪ್ಲವ್ ಸೊರೇನ್ ಎಂಬುದು ಆತನ ನಿಜವಾದ ಹೆಸರೇ ಎಂಬುದನ್ನು ನಾವು ಇನ್ನಷ್ಟೇ ತನಿಖೆ ಮಾಡಬೇಕಾಗಿದೆ. ನಾವು ಆತನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದೇವೆ'' ಎಂದು ಗೋಯಲ್ ಹೇಳಿದ್ದಾರೆ.
ಐಎನ್‌ಎಯಲ್ಲಿ ಸೊರೇನ್ ಮಾಡುತ್ತಿದ್ದ ಕೆಲಸದ ಸ್ವರೂಪ ಅಥವಾ ಆತ ಅಲ್ಲಿ ಹೇಗೆ ಕೆಲಸಕ್ಕೆ ಸೇರಿದ ಎಂಬ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ನೌಕಾ ಅಕಾಡೆಮಿಯಲ್ಲಿ ಆತನ ಉಪಸ್ಥಿತಿ ಭದ್ರತಾ ಕಳವಳಕ್ಕೆ ಕಾರಣವಾಗಿದೆಯೇ ಎಂಬ ಬಗ್ಗೆಯೂ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದಾಖಲೆಗಳಿಲ್ಲದೆ ನೆಲೆಸಿದ್ದಕ್ಕಾಗಿ ಕಳೆದ ನಾಲ್ಕು ದಿನಗಳಲ್ಲಿ ಕಣ್ಣೂರು ಪೊಲೀಸರು ಜಿಲ್ಲೆಯಲ್ಲಿ ಐವರು ಬಾಂಗ್ಲಾದೇಶಿ ಮಹಿಳೆಯರನ್ನು ಬಂಧಿಸಿದ ಬೆನ್ನಲ್ಲೇ ಈ ಬಂಧನ ನಡೆದಿದೆ.

