HEALTH TIPS

ಕುನೋದಲ್ಲಿ ಚೀತಾ ಸಂತಾನ ಅಭಿವೃದ್ಧಿ, ಭಾರತದಲ್ಲೇ ಹುಟ್ಟಿದ KGP12ಗೆ ನಾಲ್ಕು ಮರಿಗಳ ಜನನ! Video

 ಭೋಪಾಲ್: ಭಾರತದ ಚೀತಾ ಸಂರಕ್ಷಣಾ ಯೋಜನೆಗೆ ಮತ್ತೊಂದು ಮಹತ್ವದ ಮೈಲಿಗಲ್ಲು ದೊರೆತಿದ್ದು, ಭಾರತದಲ್ಲೇ ಹುಟ್ಟಿದ ಹೆಣ್ಣು ಚೀತಾ KGP12 ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.


ಹೌದು.. ಪ್ರಾಜೆಕ್ಟ್ ಚೀತಾ ಆರಂಭವಾಗಿ ನಾಲ್ಕು ವರ್ಷ ಪೂರ್ಣಗೊಂಡ ಬೆನ್ನಲ್ಲೇ ಈ ಸಂತಸದ ಸುದ್ದಿ ಹೊರಬಿದ್ದಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಭಾರತದಲ್ಲೇ ಹುಟ್ಟಿದ ಹೆಣ್ಣು ಚೀತಾ KGP12 ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.

ಈ ಮೂಲಕ ಭಾರತದಲ್ಲಿ ಹುಟ್ಟಿ, ಇಲ್ಲಿನ ಕಾಡಿನಲ್ಲೇ ಸಂತಾನೋತ್ಪತ್ತಿ ಮಾಡಿದ ಚೀತಾ ಎಂಬ ಹೆಗ್ಗಳಿಕೆಗೆ KGP12 ಪಾತ್ರವಾಗಿದೆ. ಸೆಪ್ಟೆಂಬರ್ 17, 2022ರಂದು ಭಾರತದಲ್ಲಿ ಚೀತಾಗಳ ಪುನರ್‌ಪರಿಚಯ ಯೋಜನೆ ಆರಂಭವಾಗಿತ್ತು.

ಇದೀಗ ಭಾರತದಲ್ಲೇ ಹುಟ್ಟಿದ ಚೀತಾ ಕಾಡಿನ ನೈಸರ್ಗಿಕ ಪರಿಸರದಲ್ಲಿ ಮರಿಗಳಿಗೆ ಜನ್ಮ ನೀಡಿರುವುದು ಯೋಜನೆಯ ಮುಂದಿನ ಹಂತಕ್ಕೆ ಮಹತ್ವದ ಬೆಳವಣಿಗೆಯಾಗಿದೆ.

KGP12 ಹಿನ್ನಲೆ

KGP12, ಗಾಮಿನಿ ಎಂಬ ಹೆಣ್ಣು ಚೀತಾದ ಮೊದಲ ಸಂತತಿಯ ಎರಡನೇ ಮರಿಯಾಗಿದೆ. ಗಾಮಿನಿಯನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿತ್ತು. KGP12ಗೆ ಸುಮಾರು 25 ತಿಂಗಳ ವಯಸ್ಸಿದ್ದಾಗಲೇ ಅದು ಕಾಡಿನಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವಾಲಯದ ಅಧಿಕೃತ ಮಾಹಿತಿ ತಿಳಿಸಿದೆ.

ಕಾಡಿನಲ್ಲೇ ಚೀತಾ ಮರಿಗಳ ಜನನ

ಚೀತಾಗಳನ್ನು ಭಾರತಕ್ಕೆ ಪುನರ್‌ಪರಿಚಯಿಸಿದ ಬಳಿಕ ಕಾಡಿನ ನೈಸರ್ಗಿಕ ಪರಿಸರದಲ್ಲಿ ದಾಖಲಾಗಿರುವ ಮೊದಲ ಸಂತಾನೋತ್ಪತ್ತಿ ಘಟನೆ ಇದಾಗಿದೆ. ಅದರಲ್ಲೂ ಭಾರತದಲ್ಲೇ ಹುಟ್ಟಿದ ಹೆಣ್ಣು ಚೀತಾ ಕಾಡಿನಲ್ಲಿ ಮರಿಗಳಿಗೆ ಜನ್ಮ ನೀಡಿರುವುದು ಯೋಜನೆಯ ಪ್ರಮುಖ ಗುರಿಯಾದ ನೈಸರ್ಗಿಕ ಪರಿಸ್ಥಿತಿಯಲ್ಲಿ ಚೀತಾಗಳ ಬದುಕುಳಿಯುವಿಕೆ ಮತ್ತು ಸಂತಾನೋತ್ಪತ್ತಿ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ವನ್ಯಜೀವಿ ತಜ್ಞರ ಪ್ರಕಾರ, ಕಾಡಿನಲ್ಲಿ ಸ್ವಾಭಾವಿಕವಾಗಿ ಸಂತಾನೋತ್ಪತ್ತಿ ನಡೆಯುವುದು ಚೀತಾಗಳು ಭಾರತೀಯ ಪರಿಸರಕ್ಕೆ ಹೊಂದಿಕೊಳ್ಳುತ್ತಿರುವುದರ ಪ್ರಮುಖ ಸೂಚಕವಾಗಿದೆ. KGP12 ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಡಿನಲ್ಲೇ ವಾಸಿಸುತ್ತಿದ್ದು, ಇದೀಗ ತನ್ನ ಮೊದಲ ಸಂತಾನಕ್ಕೆ ಜನ್ಮ ನೀಡಿದೆ.

ಭಾರತದಲ್ಲಿ ಚೀತಾಗಳ ಸಂಖ್ಯೆ ಏರಿಕೆ

ಈ ನಾಲ್ಕು ಮರಿಗಳ ಜನನದೊಂದಿಗೆ ದೇಶದಲ್ಲಿನ ಚೀತಾಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಕುನೋ ರಾಷ್ಟ್ರೀಯ ಉದ್ಯಾನ ಹಾಗೂ ಮಧ್ಯಪ್ರದೇಶದ ಇತರ ಚೀತಾ ವಾಸಸ್ಥಳಗಳಲ್ಲಿ ಚೀತಾ ಸಂರಕ್ಷಣಾ ಕಾರ್ಯಕ್ರಮ ವಿಸ್ತರಿಸುತ್ತಿದೆ. ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಈ ಬೆಳವಣಿಗೆಯನ್ನು ಚೀತಾ ಸಂರಕ್ಷಣಾ ಪ್ರಯತ್ನಗಳಲ್ಲಿನ ಮಹತ್ವದ ಸಾಧನೆ ಎಂದು ಬಣ್ಣಿಸಿದ್ದಾರೆ.

ಕುನೋ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು, ವನ್ಯಜೀವಿ ನಿರ್ವಹಣಾ ಸಿಬ್ಬಂದಿ, ಪಶುವೈದ್ಯರು ಮತ್ತು ಕ್ಷೇತ್ರ ಸಿಬ್ಬಂದಿಯ ನಿರಂತರ ಪರಿಶ್ರಮವನ್ನು ಅವರು ಶ್ಲಾಘಿಸಿದ್ದಾರೆ.

2022ರಲ್ಲಿ ನಮೀಬಿಯಾದಿಂದ ಚೀತಾಗಳನ್ನು ಭಾರತಕ್ಕೆ ಕರೆತರುವ ಮೂಲಕ ಆರಂಭವಾದ ಪ್ರಾಜೆಕ್ಟ್ ಚೀತಾ ಇದೀಗ ಭಾರತದಲ್ಲೇ ಹುಟ್ಟಿದ ಎರಡನೇ ತಲೆಮಾರಿನ ಚೀತಾಗಳ ಸಂತಾನೋತ್ಪತ್ತಿಯ ಹಂತ ತಲುಪಿದೆ. KGP12ಗೆ ಜನಿಸಿರುವ ನಾಲ್ಕು ಮರಿಗಳು ಈ ಯೋಜನೆಯ ಮುಂದಿನ ಪಯಣಕ್ಕೆ ಹೊಸ ನಿರೀಕ್ಷೆ ಮೂಡಿಸಿವೆ.

ಈ ಮರಿಗಳ ಜನನದೊಂದಿಗೆ ಭಾರತದಲ್ಲಿ ಹುಟ್ಟಿ ಬದುಕುಳಿದಿರುವ ಚೀತಾಗಳ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಸದ್ಯ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 53 ಚೀತಾಗಳಿದ್ದು, ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯದಲ್ಲಿ 3 ಚೀತಾಗಳಿವೆ. ಚೀತಾಗಳಿಗೆ ಮೂರನೇ ತಾಣವಾಗಿ ರಾಣಿ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶವನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಚೀತಾಗಳನ್ನು ಅಲ್ಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಲಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries