ಆರ್‌ಬಿಐನ ಈ ನಡೆಯಿಂದಾಗಿ ಬ್ಯಾಂಕುಗಳ ದೈನಂದಿನ ನಗದೀಕರಣ (ದ್ರವ್ಯತೆ) ನಿರ್ವಹಣೆ ಕೊಂಚ ಕಠಿಣವಾಗಲಿದೆ. ರಾತ್ರೋರಾತ್ರಿ ಪಡೆಯುವ ಸಾಲದ ದರಗಳು (Overnight market rates) ಪಾಲಿಸಿ ರೆಪೋ ದರಕ್ಕೆ ಹತ್ತಿರವಾಗುವ ಸಾಧ್ಯತೆಯಿದೆ. ಜೊತೆಗೆ, ಅಲ್ಪಾವಧಿ ಡೆಪಾಸಿಟ್ ಹಾಗೂ ಸಾಲದ ವೆಚ್ಚಗಳು ಕೊಂಚ ದುಬಾರಿಯಾಗಬಹುದು. ಆದರೆ ಯುಪಿಐ (UPI) ಮತ್ತು ಎನ್‌ಇಎಫ್‌ಟಿ (NEFT) ಯಂತಹ ಚಿಲ್ಲರೆ ಪಾವತಿ ವ್ಯವಸ್ಥೆಗಳ ಮೇಲೆ ಇದರಿಂದ ಯಾವುದೇ ಪರಿಣಾಮ ಬೀರಲ್ಲ.
ಸಾಮಾನ್ಯವಾಗಿ ಬ್ಯಾಂಕುಗಳು ತಮ್ಮಲ್ಲಿರುವ ಡೆಪಾಸಿಟ್‌ಗಳ ಪೈಕಿ ಒಂದಿಷ್ಟು ಭಾಗವನ್ನು ಆರ್‌ಬಿಐ ಬಳಿ ನಗದಿನ ರೂಪದಲ್ಲಿ ಕಾಯ್ದಿರಿಸಬೇಕಾಗುತ್ತದೆ, ಇದನ್ನೇ ಸಿಆರ್‌ಆರ್ (CRR) ಎನ್ನಲಾಗುತ್ತದೆ. ಈ ಹಣಕ್ಕೆ ಆರ್‌ಬಿಐ ಯಾವುದೇ ಬಡ್ಡಿ ನೀಡುವುದಿಲ್ಲ. ಬ್ಯಾಂಕುಗಳು ಪ್ರತಿದಿನವೂ ನಿಯಮದಂತೆ ನಿಗದಿತ ನಗದನ್ನು ಕಾಯ್ದುಕೊಳ್ಳಬೇಕು. ಈ ಮೊದಲು ಬ್ಯಾಂಕುಗಳು ನಿಗದಿತ ಮೊತ್ತದ ಕನಿಷ್ಠ ಶೇಕಡಾ 90 ರಷ್ಟನ್ನು ಪ್ರತಿದಿನ ಕಾಯ್ದುಕೊಳ್ಳಬೇಕಿತ್ತು. ಆದರೆ ಅಕ್ಟೋಬರ್ 16ರಿಂದ ಇದು ಶೇಕಡಾ 99ಕ್ಕೆ ಏರಿಕೆಯಾಗಲಿದೆ. ಇದರಿಂದಾಗಿ ಬ್ಯಾಂಕುಗಳ ನಮ್ಯತೆ (ಫ್ಲೆಕ್ಸಿಬಿಲಿಟಿ) ಕಡಿಮೆಯಾಗಿ, ಪ್ರತಿದಿನ ಹೆಚ್ಚಿನ ಹಣವನ್ನು ಸುಮ್ಮನೆ ಇಡಬೇಕಾಗುತ್ತದೆ. ಪರಿಣಾಮವಾಗಿ, ತುರ್ತು ದಿನನಿತ್ಯದ ನಗದು ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ.
ಸಿಆರ್‌ಆರ್ ಮತ್ತು ದೈನಂದಿನ ನಿರ್ವಹಣೆ: ಈ 99% ನಿಯಮ ಏಕೆ ಪ್ರಮುಖ?
ದಿನಂಪ್ರತಿ ಸುಮಾರು ಶೇಕಡಾ 99ರಷ್ಟು ಕಾಯ್ದಿರಿಸುವುದು ಕಡ್ಡಾಯವಾಗಿರುವುದರಿಂದ, ಬ್ಯಾಂಕುಗಳಲ್ಲಿ ದಿನದ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಆಗುತ್ತಿದ್ದ ನಗದಿನ ಕೊರತೆಗೆ ತಡೆಬೀಳಲಿದೆ. ಇನ್ಮುಂದೆ ಬ್ಯಾಂಕುಗಳು ವಾರದ ಕೊನೆಯ ದಿನಗಳಲ್ಲಿ ಬ್ಯಾಲೆನ್ಸ್ ಸರಿದೂಗಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ತ್ರೈಮಾಸಿಕದ ಅಂತ್ಯ, ಶಾಸನಬದ್ಧ ತೆರಿಗೆ ಪಾವತಿ ಮತ್ತು ದೊಡ್ಡ ಮಟ್ಟದ ವಹಿವಾಟುಗಳ ಸಮಯದಲ್ಲಿ ಬ್ಯಾಂಕುಗಳಿಗೆ ನಗದಿನ ಅಭಾವ ಎದುರಾಗಬಹುದು. ಇದು ರೆಪೋ ದರ ಅಥವಾ ಒಟ್ಟಾರೆ ಸಿಆರ್‌ಆರ್ ಬದಲಾಯಿಸದೇ ನಗದೀಕರಣದ ಏರಿಳಿತಗಳನ್ನು ನಿಯಂತ್ರಿಸುತ್ತದೆ. ಪರಿಣಾಮವಾಗಿ, ಸಣ್ಣ ಮತ್ತು ದೊಡ್ಡ ಬ್ಯಾಂಕುಗಳು ತಮ್ಮ ಬೊಕ್ಕಸದ ಹಣವನ್ನು (Treasury) ಅತ್ಯಂತ ಶಿಸ್ತುಬದ್ಧವಾಗಿ ನಿರ್ವಹಿಸಬೇಕಾಗುತ್ತದೆ.
ರಾತ್ರೋರಾತ್ರಿ ಸಾಲ ಮತ್ತು ಬ್ಯಾಂಕ್‌ಗಳ ದ್ರವ್ಯತೆ (Liquidity)
ಓವರ್‌ನೈಟ್ ಕಾಲ್ ಮನಿ, ಟ್ರೈ-ಪಾರ್ಟಿ ರೆಪೋ ಮತ್ತು ಮಾರುಕಟ್ಟೆ ರೆಪೋ ದರಗಳು ಈಗ ರೆಪೋ ದರದ ಅಸುಪಾಸಿನಲ್ಲೇ ಇರಲಿವೆ. ತಿಂಗಳ ಕೊನೆಯಲ್ಲಿ ಮತ್ತು ಸರ್ಕಾರದ ತೆರಿಗೆ ಸಂಗ್ರಹಣೆ ಹೆಚ್ಚಿರುವ ಸಮಯದಲ್ಲಿ ಸಾಲದ ದರಗಳು ದಿಢೀರ್ ಏರಿಕೆಯಾಗುವ ಸಾಧ್ಯತೆಯಿರುತ್ತದೆ. ಅಲ್ಪಾವಧಿಯ ಕಮರ್ಷಿಯಲ್ ಪೇಪರ್ ಮತ್ತು ಸರ್ಟಿಫಿಕೇಟ್ ಆಫ್ ಡೆಪಾಸಿಟ್ ಇಳುವರಿ (Yields) ಹೆಚ್ಚಾಗಬಹುದು. ಹಾಗೆಯೇ ಟ್ರೆಜರಿ ಬಿಲ್‌ಗಳಿಗೆ ಇರುವ ಬೇಡಿಕೆಯು ದೀರ್ಘಾವಧಿಯ ಕಡೆಗೆ ವಾಲಬಹುದು. ಜೊತೆಗೆ, ಲಿಕ್ವಿಡ್ ಮತ್ತು ಓವರ್‌ನೈಟ್ ಫಂಡ್‌ಗಳಲ್ಲಿ ದಿನನಿತ್ಯದ ಏರಿಳಿತಗಳ ನಡುವೆಯೂ ಕೊಂಚ ಹೆಚ್ಚಿನ ಆದಾಯ ನಿರೀಕ್ಷಿಸಬಹುದು.

