ನವದೆಹಲಿ: ಹಥ್ರಾಸ್ ಒಳಸಂಚು ಪ್ರಕರಣದಲ್ಲಿ ಜಾಮೀನು ಷರತ್ತಿನ ಭಾಗವಾಗಿ ಸಲ್ಲಿಸಲಾಗಿದ್ದ ತನ್ನ ಪಾಸ್ಪೋರ್ಟ್ನ್ನು ಮರಳಿಸುವಂತೆ ಕೋರಿ ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಸರ್ವೋಚ್ಚ ನ್ಯಾಯಾಲಯವು ನವೆಂಬರ್ 2ಕ್ಕೆ ಮುಂದೂಡಿದೆ.
ಬೆಳಿಗ್ಗೆಯಷ್ಟೇ ತನಗೆ ಅರ್ಜಿಯ ಪ್ರತಿಯನ್ನು ತಲುಪಿಸಲಾಗಿದ್ದು, ಈ ಕುರಿತು ಸೂಚನೆಗಳನ್ನು ಪಡೆಯಲು ಸಮಯ ಬೇಕು ಎಂಬ ಉತ್ತರ ಪ್ರದೇಶದ ಪರ ನ್ಯಾಯವಾದಿ ರುಚಿರಾ ಗೋಯೆಲ್ ಅವರ ಕೋರಿಕೆಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಅಲೋಕ್ ಅರಾಧೆ ಅವರ ಪೀಠವು ವಿಚಾರಣೆಯನ್ನು ನ.2ಕ್ಕೆ ಮುಂದೂಡಿತು.
ಉ.ಪ್ರದೇಶದ ಹಥ್ರಾಸ್ನಲ್ಲಿ ನಡೆದಿದ್ದ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಗಾರಿಕೆಗಾಗಿ 2020,ಅ.6ರಂದು ಅಲ್ಲಿಗೆ ತೆರಳಿದ್ದ ಕಪ್ಪನ್ರನ್ನು ಪೋಲಿಸರು ಬಂಧಿಸಿದ್ದರು. ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಬಳಿಕ ದಂಗೆಗಳನ್ನು ಪ್ರಚೋದಿಸಲು ಸಂಚು ಹೂಡಿದ್ದ ಆರೋಪದಲ್ಲಿ ಅವರ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿತ್ತು.
ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಕಪ್ಪನ್ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಅದು ಅವರಿಗೆ ಸೆ.9, 2022ರಂದು ಜಾಮೀನು ನೀಡಿತ್ತು.



