ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಮಾಡಲಾಗುವ ವರ್ಚುವಲ್ ಕ್ಯೂ ಬುಕಿಂಗ್ ಶುಲ್ಕವನ್ನು ಈಗಿರುವ ₹5ರಿಂದ ₹10ಕ್ಕೆ ಹೆಚ್ಚಿಸಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸುವ ಸಾಧ್ಯತೆಯಿದೆ. ಪಂಪಾದಲ್ಲಿರುವ ಶೌಚಾಲಯಗಳನ್ನು ಸಂಪೂರ್ಣ ಉಚಿತಗೊಳಿಸುವ ಉದ್ದೇಶದಿಂದ ಈ ಶುಲ್ಕ ಹೆಚ್ಚಳಕ್ಕೆ ಮಂಡಳಿ ಚಿಂತನೆ ನಡೆಸಿದೆ.
ಶುಲ್ಕ ಹೆಚ್ಚಳ ಜಾರಿಗೆ ತರಲು ಕೇರಳ ಹೈಕೋರ್ಟ್ನ ಅನುಮತಿ ಪಡೆಯಲು ಮಂಡಳಿ ನಿರ್ಧರಿಸಿದೆ. ನ್ಯಾಯಾಲಯದ ಅನುಮತಿ ದೊರೆತ ಬಳಿಕವಷ್ಟೇ ಹೊಸ ಶುಲ್ಕವನ್ನು ಜಾರಿಗೆ ತರಲಾಗುವುದು ಎಂದು ತಿಳಿದುಬಂದಿದೆ.
ಆದರೆ, ಬುಕಿಂಗ್ ಶುಲ್ಕವನ್ನು ದ್ವಿಗುಣಗೊಳಿಸುವ ನಿರ್ಧಾರದಿಂದ ಭಕ್ತರಿಂದ ಆಕ್ಷೇಪಗಳು ವ್ಯಕ್ತವಾಗಬಹುದು ಎಂಬ ಅಭಿಪ್ರಾಯ ಮಂಡಳಿಯ ಆಡಳಿತ ಸಮಿತಿಯಲ್ಲಿ ಕೇಳಿಬಂದಿದೆ.
ಈ ಬದಲಾವಣೆಯಿಂದ ಅಯ್ಯಪ್ಪ ಭಕ್ತರಿಗೆ ಅನುಕೂಲವಾಗಲಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಜಯಕುಮಾರ್ ತಿಳಿಸಿದ್ದಾರೆ.
ಪಂಪಾದಲ್ಲಿ ಶೌಚಾಲಯ ಬಳಕೆಗೆ ಭಕ್ತರಿಂದ ಶುಲ್ಕ ಪಡೆಯುವುದನ್ನು ತಪ್ಪಿಸಿ, ಎಲ್ಲರಿಗೂ ಉಚಿತ ಸೌಲಭ್ಯ ಕಲ್ಪಿಸುವುದು ಈ ಪ್ರಸ್ತಾವನೆಯ ಪ್ರಮುಖ ಉದ್ದೇಶವಾಗಿದೆ. ಆದರೆ, ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದ ಅಂತಿಮ ನಿರ್ಧಾರವನ್ನು ಹೈಕೋರ್ಟ್ನ ಅನುಮತಿಯ ಬಳಿಕ ಕೈಗೊಳ್ಳಲಾಗುತ್ತದೆ.



