ನವದೆಹಲಿ: ಅನಾರೋಗ್ಯಕ್ಕೀಡಾಗಿದ್ದ ತಾಯಿಯ ಶ್ರೀಘ್ರ ಚೇತರಿಕೆಗೆ ಪ್ರಾರ್ಥಿಸಿ ಯುವಕೊನೊಬ್ಬ ಭಗವಾನ್ ಶಿವನ ಮೊರೆ ಹೋಗಿದ್ದಾನೆ.
ಹೌದು, ಬಿಹಾರದ ಯುವಕ ' ಮೋನು ಮೇತುರ್ಬಾಲಾ' ಎಂಬಾತ, ತಾಯಿಯ ಆರೋಗ್ಯ ಸುಧಾರಿಸಿದರೆ ಓಡುವ ಮೂಲಕ ದೇಶದಾದ್ಯಂತ ಇರುವ ಎಲ್ಲಾ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯುವುದಾಗಿ ಹರಕೆ ಹೊತ್ತಿದ್ದರು.
ಅದರಂತೆ ತಾಯಿ ಚೇತರಿಸಿಕೊಂಡ ನಂತರ ಅವರು ಓಟ ಆರಂಭಿಸಿದ್ದು, ತಮ್ಮ ಈ ಯಾತ್ರೆಯ ವಿಡಿಯೊಗಳನ್ನು ಇನ್ಸ್ಟಾಗ್ರಾಮ್ನಲ್ಲಿ (@monu_betaurabala) ಹಂಚಿಕೊಂಡಿದ್ದಾರೆ.
ವಿಡಿಯೊವೊಂದರಲ್ಲಿ ಮಹಾರಾಷ್ಟ್ರದ ಶಾಸಕರೊಬ್ಬರು ಅವರೊಂದಿಗೆ ಓಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ರೈಲು ಅಥವಾ ಬಸ್ಸಿನಲ್ಲಿ ಆರಾಮದಾಯಕವಾಗಿ ಪ್ರಯಾಣಿಸುವ ಬದಲು, ಕಾಲ್ನಡಿಗೆಯಲ್ಲೇ ಓಡುತ್ತಾ ಸಾಗುತ್ತಿರುವ ಈ ಅಪರೂಪದ ಯಾತ್ರೆಗೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ತಾಯಿಯ ಮೇಲಿನ ಅಪಾರ ಪ್ರೀತಿ
ಇವರ ಈ ಕಥೆಯು ತಾಯಿ-ಮಗನ ನಡುವಿನ ಅಪಾರ ಪ್ರೀತಿ ಮತ್ತು ಸಮರ್ಪಣೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಬಿಹಾರದ ಅರರಿಯಾ ಜಿಲ್ಲೆಯ 19 ವರ್ಷದ ಮೋನು ಅವರ ತಾಯಿ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದರು. ಅವರನ್ನು ಕಳೆದುಕೊಳ್ಳುವ ಭಯದಲ್ಲಿದ್ದ ಮೋನು ಭಗವಾನ್ ಶಿವನ ಮೊರೆ ಹೋಗಿದ್ದರು. ತಾಯಿಯ ಜೀವ ಉಳಿದು ಆರೋಗ್ಯ ಸಂಪೂರ್ಣ ಸುಧಾರಿಸಿದರೆ, ದೇಶದಾದ್ಯಂತ ಓಡುವ ಮೂಲಕ 12 ಪವಿತ್ರ ಜ್ಯೋತಿರ್ಲಿಂಗಗಳ ದರ್ಶನ ಪಡೆದು ಆಶೀರ್ವಾದ ಪಡೆಯುವುದಾಗಿ ಶಿವನಲ್ಲಿ ಹರಕೆ ಹೊತ್ತಿದ್ದರು. ಅದರಂತೆ ಹರಕೆ ತೀರಿಸಿ ಭಗವಂತನಿಗೆ ಕೃತಜ್ಞತೆ ಸಲ್ಲಿಸಲು ಅವರು 2026ರ ಮಾರ್ಚ್ 15, ರಿಂದ ಈ ಪವಿತ್ರ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ.
ದಿನಕ್ಕೆ 50 ಕಿ.ಮೀ ಓಟ: 5 ಜ್ಯೋತಿರ್ಲಿಂಗಗಳ ದರ್ಶನ ಪೂರ್ಣ
'Times of india' ವರದಿ ಪ್ರಕಾರ, ಮಾರ್ಚ್ 15 ರಂದು ತಮ್ಮ ಯಾತ್ರೆಯನ್ನು ಆರಂಭಿಸಿದ ಮೋನು, ಪ್ರಸ್ತುತ ದಿನಕ್ಕೆ ಸರಾಸರಿ 50 ಕಿಲೋಮೀಟರ್ ಓಡುತ್ತಿದ್ದಾರೆ. ಈಗಾಗಲೇ ಸುಮಾರು 8,000 ಕಿಲೋಮೀಟರ್ ದೂರ ಕ್ರಮಿಸಿದ್ದು 12 ಜ್ಯೋತಿರ್ಲಿಂಗಗಳ ಪೈಕಿ 5 ಕ್ಷೇತ್ರಗಳ ದರ್ಶನ ಪೂರ್ಣಗೊಳಿಸಿದ್ದಾರೆ.
ಅವರು ಮೊದಲು ಭೇಟಿ ನೀಡಿದ್ದು, ಜಾರ್ಖಂಡ್ನ ಬಾಬಾ ವೈದ್ಯನಾಥ ಧಾಮಕ್ಕೆ. ನಂತರ ಮಹಾರಾಷ್ಟ್ರದ ಪವಿತ್ರ ಕ್ಷೇತ್ರಗಳತ್ತ ಅವರ ಯಾತ್ರೆ ಸಾಗಿತು. ಮೋನು ಅವರಿಗೆ ಪ್ರತಿಯೊಂದು ಕಿಲೋಮೀಟರ್ ದೂರವೂ ಕೇವಲ ದಾರಿಯಷ್ಟೇ ಅಲ್ಲ, ಭಗವಂತನ ಮೇಲಿನ ಭಕ್ತಿಯ ಸಂಕೇತವಾಗಿದೆ. ಅವರ ಈ ಯಾತ್ರೆ ಇನ್ನೂ ಮುಂದುವರಿಯುತ್ತಿದ್ದು, ಉಳಿದ ಜ್ಯೋತಿರ್ಲಿಂಗಗಳ ದರ್ಶನ ಪಡೆದು ಹರಕೆ ತೀರಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ.
ಸವಾಲುಗಳ ನಡುವೆಯೂ ಮುಂದುವರಿದ ಯಾತ್ರೆ
ಮೋನು ಮೇತುರ್ಬಾಲಾ ತಮ್ಮ ಈ ವಿಶೇಷ ಪ್ರಯಾಣದ ಪ್ರತಿಯೊಂದು ವಿವರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ (@monu_betaurabala) ಹಂಚಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆತ್ತವರ ಮೇಲಿನ ಇವರ ಅಪಾರ ಭಕ್ತಿ ಮತ್ತು ಕಾಳಜಿಯನ್ನು ಕಂಡು ಸಾರ್ವಜನಿಕರು 'ಶ್ರವಣ ಕುಮಾರ'ನಿಗೆ ಹೋಲಿಸುತ್ತಿದ್ದಾರೆ. ವಿಶಾಲ ರಸ್ತೆಗಳು, ದೈಹಿಕ ಬಳಲಿಕೆ ಮತ್ತು ಅಜ್ಞಾತ ಸ್ಥಳಗಳ ಸವಾಲುಗಳ ನಡುವೆಯೂ ಅವರು, ತಮ್ಮ ಸಂಕಲ್ಪವನ್ನು ಮುಂದುವರಿಸಿದ್ದು, ಉಳಿದ ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿ ಓಟ ಮುಂದುವರಿಸಿದ್ದಾರೆ.
ದೇಶದ 12 ಜ್ಯೋತಿರ್ಲಿಂಗಗಳು
ಹಿಂದೂ ಪರಂಪರೆಯಲ್ಲಿ, ದೇಶದ ವಿವಿಧ ಭಾಗಗಳಲ್ಲಿರುವ 12 ಜ್ಯೋತಿರ್ಲಿಂಗಗಳು ಭಗವಾನ್ ಶಿವನಿಗೆ ಸಮರ್ಪಿತವಾದ ಅತ್ಯಂತ ಪವಿತ್ರ ಹಾಗೂ ಪೂಜನೀಯ ಯಾತ್ರಾ ಸ್ಥಳಗಳಾಗಿವೆ. 'ಜ್ಯೋತಿರ್ಲಿಂಗ' ಎಂಬ ಪದವು 'ಜ್ಯೋತಿ' (ಬೆಳಕು) ಮತ್ತು 'ಲಿಂಗ' (ಶಿವನ ಸಂಕೇತ) ಎಂಬ ಶಬ್ದಗಳಿಂದ ಬಂದಿದೆ.
ಸೋಮನಾಥ (ಗುಜರಾತ್)
ಮಲ್ಲಿಕಾರ್ಜುನ (ಆಂಧ್ರಪ್ರದೇಶ)
ಮಹಾಕಾಳೇಶ್ವರ (ಉಜ್ಜಯಿನಿ, ಮಧ್ಯಪ್ರದೇಶ)
ಓಂಕಾರೇಶ್ವರ (ಮಧ್ಯಪ್ರದೇಶ)
ಕೇದಾರನಾಥ (ಉತ್ತರಾಖಂಡ)
ಭೀಮಾಶಂಕರ (ಮಹಾರಾಷ್ಟ್ರ)
ಕಾಶಿ ವಿಶ್ವನಾಥ (ವಾರಾಣಸಿ, ಉತ್ತರಪ್ರದೇಶ)
ತ್ರಯಂಬಕೇಶ್ವರ (ಮಹಾರಾಷ್ಟ್ರ)
ವೈದ್ಯನಾಥ (ಜಾರ್ಖಂಡ್)
ನಾಗೇಶ್ವರ (ಗುಜರಾತ್)
ರಾಮೇಶ್ವರಂ (ತಮಿಳುನಾಡು)
ಘೃಷ್ಣೇಶ್ವರ (ಮಹಾರಾಷ್ಟ್ರ)
ಈ ದೇವಾಲಯಗಳು ವರ್ಷಪೂರ್ತಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತವೆ.



