ಕೊಚ್ಚಿ: ಕೇರಳದ ಕರುವನ್ನೂರು ಸಹಕಾರ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳು ಸಲ್ಲಿಸಿರುವ ಬಿಡುಗಡೆ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಲಾಗಿದೆ. ಕೊಚ್ಚಿಯ ಪಿಎಂಎಲ್‌ಎ (ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ) ವಿಶೇಷ ನ್ಯಾಯಾಲಯ ಅರ್ಜಿಯ ವಿಚಾರಣೆ ನಡೆಸಲಿದೆ.
ವಾದ ಮಂಡಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಆರೋಪಿಗಳು ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿದೆ.
ಕರುವನ್ನೂರು ಸಹಕಾರ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಪಿಎಂ ಪಕ್ಷ ಹಾಗೂ ಪಕ್ಷದ ಕೆಲವು ನಾಯಕರು ಬಿಡುಗಡೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಸಿಪಿಎಂ 64ನೇ ಆರೋಪಿಯಾಗಿದೆ. ವಿಚಾರಣೆ ಆರಂಭವಾಗುವ ಮೊದಲೇ ತಮ್ಮನ್ನು ಪ್ರಕರಣದಿಂದ ಕೈಬಿಡಬೇಕು ಎಂಬುದು ಅರ್ಜಿದಾರರ ಮನವಿಯಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ. ವಿಚಾರಣೆ ನಡೆಸಲು ಅಗತ್ಯವಾದ ಸಾಕ್ಷ್ಯಾಧಾರಗಳೂ ಇಲ್ಲ ಎಂದು ಸಿಪಿಎಂ ನಾಯಕರು ವಾದಿಸಿದ್ದಾರೆ. ರಾಜಕೀಯ ಪಕ್ಷವೊಂದನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗದು ಎಂಬ ವಾದವನ್ನೂ ಅವರು ಮುಂದಿಟ್ಟಿದ್ದಾರೆ.
ಆದರೆ, ಆರೋಪಿಗಳ ಬೇಡಿಕೆಯನ್ನು ವಿರೋಧಿಸಿ ಜಾರಿ ನಿರ್ದೇಶನಾಲಯ (ಇ.ಡಿ.) ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ.



