ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವು ದೇಶದ ಐ.ಟಿ ವಲಯದ ಉದ್ಯೋಗಗಳನ್ನು ನಾಶ ಮಾಡುತ್ತದೆ ಎಂಬ ಭೀತಿ ಅನಗತ್ಯ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಮಂಗಳವಾರ ಹೇಳಿದ್ದಾರೆ. ಐ.ಟಿ. ಸೇವಾ ಕಂಪನಿಗಳಿಗೆ ಬೇಡಿಕೆಯು ಈಗ ಮೊದಲಿಗಿಂತಲೂ ಹೆಚ್ಚಾಗಿದೆ ಎಂದು ನಿಲೇಕಣಿ ಹೇಳಿದ್ದಾರೆ.
ಎ.ಐ ಎಂಬುದು ನಿಧಾನವಾಗಿ ಚಲಿಸುವ ಸುನಾಮಿ ಇದ್ದಂತೆ, ಅದು ಹಲವು ಬಗೆಯ ಕೆಲಸಗಳಿಗೆ ಇರುವ ಬೇಡಿಕೆಯನ್ನು ಇನ್ನಿಲ್ಲವಾಗಿಸಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜೀವಾ ಹೇಳಿರುವುದಕ್ಕೆ ನಿಲೇಕಣಿ ಅವರು ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
'ಇವೆಲ್ಲ ದೊಡ್ಡ ಬಂಡವಾಳ ಹೊಂದಿರುವವರ ಹಿತಾಸಕ್ತಿಗೆ ಅನುಗುಣವಾಗಿರುವ, ಅತಿಶಯೋಕ್ತಿಯ ಹಾಗೂ ಭೀತಿಯ ಮಾತುಗಳು ಎಂದು ನನಗೆ ಅನಿಸುತ್ತಿದೆ. ಇನ್ಫೊಸಿಸ್ ಹಾಗೂ ಇತರ ಕಂಪನಿಗಳ ಅಗತ್ಯವು ಹಿಂದೆಂದಿಗಿಂತಲೂ ಈಗ ಹೆಚ್ಚು. ಏಕೆಂದರೆ ಉದ್ಯಮವನ್ನು ಪರಿವರ್ತಿಸುವ ಕೆಲಸವು ತೀರಾ ಸಂಕೀರ್ಣವಾದುದು' ಎಂದು ನಿಲೇಕಣಿ ಅವರು ಹೇಳಿದ್ದಾರೆ. 'ನಮಗೆ ಮುಂದೆ ಇನ್ನಷ್ಟು ಕೆಲಸಗಳು ಲಭಿಸಲಿವೆ' ಎಂದು ಕೂಡ ಅವರು ಹೇಳಿದ್ದಾರೆ.
'ಎ.ಐ ಸೇವೆ ಬೆಳೆಯಲಿದೆ': ಎ.ಐ ಸೇವೆಗಳು ಮುಂದಿನ ಎರಡು-ಮೂರುವರ್ಷಗಳಲ್ಲಿ ಇನ್ಫೊಸಿಸ್‌ನ ಒಟ್ಟು ಕೆಲಸಗಳಲ್ಲಿ ಸರಿಸುಮಾರು ಅರ್ಧದಷ್ಟಾಗಲಿವೆ ಎಂದು ಕಂಪನಿಯ ಸಿಇಒ ಸಲೀಲ್ ಪಾರೇಖ್ ಹೇಳಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ ಇನ್ಫೊಸಿಸ್‌ನ ಒಟ್ಟು ವರಮಾನದಲ್ಲಿ ಎ.ಐ ಸೇವೆಗಳ ಪಾಲು ಶೇ 8ಕ್ಕಿಂತ ಹೆಚ್ಚಿತ್ತು.
ಎ.ಐ ಏಜೆಂಟ್‌ಗಳ ನಿರ್ಮಾಣ, ಕೋಡಿಂಗ್ ಕೆಲಸ ಹಾಗೂ ಗ್ರಾಹಕರಿಗೆ ಹಳೆಯ ತಂತ್ರಜ್ಞಾನದ ಆಧುನೀಕರಣದ ಕೆಲಸವು ಈಗ ಕಂಪನಿಯ ಒಟ್ಟು ಗಾತ್ರಕ್ಕೆ ಹೋಲಿಸಿದರೆ ಕಡಿಮೆ ಇದೆ. ಆದರೆ ಅದು ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ, ಇದೇ ವೇಗ ಉಳಿದರೆ ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಅದು ಕಂಪನಿಯ ಒಟ್ಟು ಕೆಲಸಗಳಲ್ಲಿ ಶೇ 20-30ರಷ್ಟು ಪಾಲನ್ನು ಹೊಂದಬಹುದು ಎಂದು ಪಾರೇಖ್ ಹೇಳಿದ್ದಾರೆ.
'ಈ ಬಗೆಯ ಸೇವೆಗಳಿಗೆ ಭಾರಿ ಬೇಡಿಕೆ ಇದೆ ಎಂಬುದನ್ನು ಬೆಳವಣಿಗೆಯ ಪ್ರಮಾಣವು ತೋರಿಸಿಕೊಟ್ಟಿದೆ' ಎಂದೂ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಎ.ಐ ತಂತ್ರಜ್ಞಾನ ಮುಂದುವರಿ ದಂತೆಲ್ಲ ಭಾರತದ ಐ.ಟಿ ಸೇವಾ ಉದ್ಯಮದ ಮೇಲೆ ಯಾವ ಬಗೆಯ ಪರಿಣಾಮ ಆಗಬಹುದು ಎಂಬ ಪ್ರಶ್ನೆಗೆ ಉತ್ತರವಾಗಿ ಅವರು, 'ಇದು ಇನ್ಫೊಸಿಸ್‌ಗೆ ಒಳ್ಳೆಯ ಬೆಳವಣಿಗೆ. ಅದೇ ದೃಷ್ಟಿಕೋನದಿಂದ ಹೇಳುವುದಾದರೆ, ದೇಶದ ತಂತ್ರಜ್ಞಾನ ಸೇವಾ ವಲಯಕ್ಕೆ ಕೂಡ ಒಳ್ಳೆಯದು' ಎಂದಿದ್ದಾರೆ.
ಇನ್ಫೊಸಿಸ್ ಕಂಪನಿಯು ಕಳೆದ ವರ್ಷ 20 ಸಾವಿರ ಮಂದಿ ಕಾಲೇಜು ಪದವೀಧರರನ್ನು ನೇಮಕ ಮಾಡಿಕೊಂಡಿದೆ. ಈ ವರ್ಷವೂ ಅಷ್ಟೇ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುವ ಆಲೋಚನೆ ಹೊಂದಿದೆ ಎಂದು ತಿಳಿಸಿದ್ದಾರೆ.
ಜೋಹೊದಲ್ಲಿ ವೇತನ ಹೆಚ್ಚಳ ಇಲ್ಲ
ತಂತ್ರಜ್ಞಾನ ಕಂಪನಿ ಜೋಹೊ ತನ್ನ ನೌಕರರ ವಾರ್ಷಿಕ ವೇತನ ಹೆಚ್ಚಳವನ್ನು ತಡೆಹಿಡಿದಿದೆ. ಎ.ಐ ಮೂಲಸೌಕರ್ಯಕ್ಕಾಗಿನ ವೆಚ್ಚಗಳು ತೀವ್ರವಾಗಿ ಏರುತ್ತಿರುವುದು, ತಂತ್ರಾಂಶ ವಲಯದ ಮುನ್ನೋಟ ಅನಿಶ್ಚಿತವಾಗಿರುವುದು ಇದಕ್ಕೆ ಕಾರಣ ಎಂದು ಹೇಳಿದೆ.
ನೌಕರರನ್ನು ದೊಡ್ಡ ಸಂಖ್ಯೆಯಲ್ಲಿ ಕೆಲಸದಿಂದ ತೆಗೆಯುವ ಸ್ಥಿತಿ ತಡೆಯಲು ಕಂಪನಿಯು ಯತ್ನಿಸುತ್ತಿದೆ. ಆದರೆ 18 ತಿಂಗಳಿನಿಂದ ಹೊಸ ನೇಮಕಾತಿ ಆಗಿಲ್ಲ ಎಂದು ಕಂಪನಿ ಸಂಸ್ಥಾಪಕ ಶ್ರೀಧರ್ ವೆಂಬು ಹೇಳಿದ್ದಾರೆ.
ನೌಕರರನ್ನು ದೊಡ್ಡ ಸಂಖ್ಯೆಯಲ್ಲಿ ಕೆಲಸದಿಂದ ತೆಗೆಯುವ ಪರಿಸ್ಥಿತಿ ಎದುರಾಗುವುದನ್ನು ತಡೆಯಲು ಕಂಪನಿಯು ಪ್ರಯತ್ನಿಸಲಿದೆ. ಆದರೂ ತಂತ್ರಾಂಶ ಸಂಬಂಧಿ ಕೆಲಸಗಳಿಗೆ ಮುನ್ನೋಟವು ಉತ್ತಮವಾಗಿಲ್ಲ ಎಂದು ವೆಂಬು ಹೇಳಿದ್ದಾರೆ.



