HEALTH TIPS

ಸಿಕ್ಕಿಂ ರಾಜ್ಯಪಾಲರಾಗಿ ದುಷ್ಯಂತ್ ಗೌತಮ್‌ ನೇಮಕ: ಅಂಕಿತಾ ಪೋಷಕರ ವಿರೋಧವೇಕೆ?

ನವದೆಹಲಿ: ‌2022ರಲ್ಲಿ ಉತ್ತರಾಖಂಡದಲ್ಲಿ ನಡೆದ 19 ವರ್ಷದ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ 'ವಿಐಪಿ'ಯೊಬ್ಬರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇತ್ತೀಚೆಗೆ ಬಿಜೆಪಿ ನಾಯಕ ದುಶ್ಯಂತ್‌ ಕುಮಾರ್‌ ಗೌತಮ್‌ ಅವರನ್ನು ಸಿಕ್ಕಿಂನ ರಾಜ್ಯಪಾಲರಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಅಂಕಿತಾಳ ಪೋಷಕರು ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಧರಣಿ ನಡೆಸಿದ್ದರು. 


ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ್ ಗಾಂಧಿ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸಿ, ಧೈರ್ಯ ತುಂಬಿದ್ದರು.

ಹೋರಾಟಗಾರ್ತಿ ಯೋಗಿತಾ ಭಯಾನ ಅವರ ಜೊತೆಗೆ ಅಂಕಿತಾ ಪೋಷಕರು ಪ್ರತಿಭಟನೆ ನಡೆಸುತ್ತಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿಂದ ತೆರಳುವಂತೆ ಒತ್ತಾಯಿಸಿದ್ದರು. ಮಗಳ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿಬಂದ 'ವಿಐಪಿ'ಗೆ ಪ್ರಮುಖ ಹುದ್ದೆ ನೀಡಲಾಗಿದೆ ಎಂದು ಕುಟುಂಬದ ಸದಸ್ಯರು ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದರು.

2022ರಲ್ಲಿ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿದ್ದ ಅಂಕಿತಾ ಅವರ ಕೊಲೆಯಾಗಿತ್ತು. ಪ್ರಕರಣ ಸಂಬಂಧ ರೆಸಾರ್ಟ್‌ ಮಾಲೀಕ ಪುಲಕಿತ್‌ ಆರ್ಯ ಮತ್ತು ನೌಕರರಾದ ಸೌರಭ್‌ ಭಾಸ್ಕರ್‌, ಅಂಕಿತ್‌ ಗುಪ್ತಾ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಸೆಷನ್ಸ್ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇತ್ತೀಚೆಗೆ ಬಹಿರಂಗವಾದ ಆಡಿಯೊ ಕ್ಲಿಪ್‌ವೊಂದರಲ್ಲಿ ಪ್ರಕರಣಕ್ಕೂ 'ಅತಿಗಣ್ಯ 'ವಿಐಪಿ'ಯೊಬ್ಬರಿಗೂ ಸಂಬಂಧವಿದೆ ಎಂದು ಆರೋಪಿಸಲಾಗಿದೆ.

ಅಂಕಿತಾಳ ಹತ್ಯೆ...

ಉತ್ತರಾಖಂಡದ ಋಷಿಕೇಶ ನಗರದ 'ವನಂತರ ರೆಸಾರ್ಟ್'ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ ಅಂಕಿತಾಳನ್ನು 2022ರ ಸೆಪ್ಟೆಂಬರ್ 18ರಂದು ಹತ್ಯೆ ಮಾಡಲಾಗಿತ್ತು.

ಈ ಹತ್ಯೆಗೆ ಸಂಬಂಧಿಸಿದಂತೆ ಮಾಜಿ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಹಾಗೂ ರೆಸಾರ್ಟ್ ಮಾಲೀಕ ಪುಲಕಿತ್‌ ಆರ್ಯ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿತ್ತು. ನಂತರ ಅವರನ್ನು ದೋಷಿಗಳೆಂದು ಪರಿಗಣಿಸಿ, ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

2025ರ ಡಿಸೆಂಬರ್‌ನಲ್ಲಿ ಅಂಕಿತಾಳ ಹತ್ಯೆ ಪ್ರಕರಣದಲ್ಲಿ 'ವಿಐಪಿ'ಯೊಬ್ಬರು ಭಾಗಿಯಾಗಿದ್ದಾರೆ ಎನ್ನಲಾದ ವಿಡಿಯೊ ತುಣುಕುಗಳು ಆನ್‌ಲೈನ್‌ನಲ್ಲಿ ಹರಿದಾಡಿದ್ದವು. ಗೌತಮ್ ಎಂಬ ವ್ಯಕ್ತಿಯೇ ಆ 'ವಿಐಪಿ' ಎಂದು ಆರೋಪಗಳು ಕೇಳಿಬಂದರೂ, ಅವರು ಆರೋಪವನ್ನು ತಳ್ಳಿಹಾಕಿದ್ದರು. ಜೊತೆಗೆ ತಮ್ಮ ಹೆಸರನ್ನು ಈ ಪ್ರಕರಣದೊಂದಿಗೆ ತಳುಕು ಹಾಕಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಪ್ರಸ್ತುತ ಈ ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಅಂಕಿತಾಳ ಪೋಷಕರು ಒತ್ತಾಯಿಸಿದ್ದರು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಶಿಫಾರಸಿನ ಮೇರೆಗೆ ಫೆಬ್ರುವರಿಯಲ್ಲಿ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು.

ಅಂಕಿತಾ ಹತ್ಯೆಗೀಡಾಗುವ ಕೇವಲ 20 ದಿನಗಳ ಹಿಂದಷ್ಟೇ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ (ಸ್ವಾಗತಕಾರಿಣಿ) ಆಗಿ ಕೆಲಸಕ್ಕೆ ಸೇರಿದ್ದಳು.

ರೆಸಾರ್ಟ್‌ಗೆ ಬರುವ ಅತಿಥಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಅಂಕಿತಾಳ ಮೇಲೆ ಪುಲಕಿತ್‌ ಆರ್ಯ ಒತ್ತಡ ಹೇರುತ್ತಿದ್ದ. ಆದರೆ, ಅಂಕಿತಾ ಇದಕ್ಕೆ ನಿರಾಕರಿಸಿದ್ದಳು ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಹೇಳಿದೆ. ಅಂಕಿತಾಳ ಕುಟುಂಬಸ್ಥರು ಮತ್ತು ಸ್ನೇಹಿತರು ಆಕೆಯೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಬಳಿಕ 2022ರ ಸೆಪ್ಟೆಂಬರ್ 18ರಂದು ಅಂಕಿತಾಳ ತಂದೆ ಆಕೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ಸೆಪ್ಟೆಂಬರ್ 18ರಂದು ಕೆಲಸದ ಭಾಗವಾಗಿ ಅಂಕಿತಾ ರೆಸಾರ್ಟ್‌ನಲ್ಲಿಯೇ ಉಳಿದುಕೊಂಡಿದ್ದಳು. ಆಗ ಪುಲಕಿತ್‌ ಆರ್ಯ ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದಾನೆ ಮತ್ತು ಹೆಚ್ಚುವರಿ ಕೆಲಸ ಮಾಡಲು ಬಲವಂತ ಮಾಡುತ್ತಿದ್ದಾನೆ ಎಂದು ಅಂಕಿತಾ ತನ್ನ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಆತಂಕಕಾರಿ ಸಂದೇಶಗಳನ್ನು ಕಳುಹಿಸಿದ್ದಳು ಎಂಬುದು ಎಸ್‌ಐಟಿ ತನಿಖೆಯಿಂದ ದೃಢಪಟ್ಟಿದೆ.

ಸೆ. 18ರಿಂದ ಅಂಕಿತಾ ನಾಪತ್ತೆಯಾಗಿದ್ದರು. ಬಳಿಕ ಅವರ ಶವ ಚೀಲಾ ಕಾಲುವೆಯಲ್ಲಿ ಸಿಕ್ಕಿತ್ತು. ಕೊಲೆ ಪ್ರಕರಣ ದಾಖಲಿಸಿದ್ದ ಪೊಲೀಸರು, ರೆಸಾರ್ಟ್‌ ಮಾಲೀಕ ಪುಲಕಿತ್‌ ಮತ್ತು ನೌಕರರಾದ ಸೌರವ್‌ ಭಾಸ್ಕರ್, ಅಂಕಿತ್ ಗುಪ್ತಾರನ್ನು ಅದೇ ದಿನ ಬಂಧಿಸಿದ್ದರು. ಆದಾಗ್ಯೂ, ಈ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ ಕೈವಾಡ ಇರುವ ಬಗ್ಗೆ ಆರೋಪಗಳು ಕೇಳಿಬಂದಿದ್ದವು.

2025ರ ಮೇ 30ರಂದು ಉತ್ತರಾಖಂಡದ ಕೋಟ್‌ದ್ವಾರ್‌ನಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು, ಆರೋಪಿಗಳನ್ನು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೋಷಿಗಳೆಂದು ಪರಿಗಣಿಸಿ, ಜೀವಾವಧಿ ಶಿಕ್ಷೆ ವಿಧಿಸಿತ್ತು.

'ವಿಐಪಿ' ಭಾಗಿಯಾಗಿರುವ ಆರೋಪ...

2025ರ ಡಿಸೆಂಬರ್‌ನಲ್ಲಿ ಅಂಕಿತಾ ಕೊಲೆ ಪ್ರಕರಣದಲ್ಲಿ ವಿಐಪಿಯೊಬ್ಬರು ಭಾಗಿಯಾಗಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸಬೇಕೆಂಬ ಒತ್ತಾಯವೂ ತೀವ್ರಗೊಂಡಿತ್ತು. ಮಾಜಿ ಬಿಜೆಪಿ ಶಾಸಕ ಅಜಯ್ ರಾಥೋರ್ ಅವರ ಪತ್ನಿ ಎಂದು ಹೇಳಿಕೊಂಡ ನಟಿ ಊರ್ಮಿಳಾ ಸನ್ವಾರ್ ಅವರು ರಾಥೋರ್ ಅವರೊಂದಿಗೆ ನಡೆದಿದೆ ಎನ್ನಲಾದ ಸಂಭಾಷಣೆಯ ವಿಡಿಯೊ ಮತ್ತು ಆಡಿಯೊವನ್ನು ಬಿಡುಗಡೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ವಿಐಪಿ ಕೈವಾಡವಿರುವ ಬಗ್ಗೆ ತನಿಖೆಯಾಗಬೇಕೆಂಬ ಕೂಗು ಹೆಚ್ಚಾಗಿತ್ತು.

ಅಂಕಿತಾ ಕೊಲೆಯಲ್ಲಿ 'Gattu' ಎಂಬ ವ್ಯಕ್ತಿ ಭಾಗಿಯಾಗಿದ್ದಾನೆ ಎಂದು ಊರ್ಮಿಳಾ ಆರೋಪಿಸಿದ್ದರು. ಪ್ರಸಾರವಾದ ಆಡಿಯೊ ಕ್ಲಿಪ್‌ನಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಐಪಿ 'Gattu' ಎಂದರೆ ಗೌತಮ್ ಎಂದು ರಾಥೋರ್ ಹೇಳಿಕೊಂಡಿದ್ದರು.

ನಂತರ, ಆ ಕ್ಲಿಪ್ ಅನ್ನು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಸೃಷ್ಟಿಸಲ್ಪಟ್ಟದ್ದು ಎಂದು ರಾಥೋರ್ ಪ್ರತಿಪಾದಿಸಿದ್ದರು. ಇತ್ತ ಗೌತಮ್ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು.

ಇದಕ್ಕೂ ಮುನ್ನ ಕೊಲೆ ಪ್ರಕರಣದಲ್ಲಿ ಪ್ರಭಾವಿ ನಾಯಕರೊಬ್ಬರು ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಎಸ್‌ಐಟಿ ತಿಳಿಸಿತ್ತು. ಆದಾಗ್ಯೂ, ಈ ಬೆಳವಣಿಗೆಯ ನಂತರ, ಉತ್ತರಾಖಂಡದಾದ್ಯಂತ ಸಿಬಿಐ ತನಿಖೆಗೆ ಆಗ್ರಹಿಸಿ ಬೇಡಿಕೆ ತೀವ್ರಗೊಂಡಿತ್ತು.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ 2026ರ ಜನವರಿ 7ರಂದು ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ದುಷ್ಯಂತ್‌ ಕುಮಾರ್‌ ಗೌತಮ್‌ ಅವರ ವಿರುದ್ಧದ ಪೋಸ್ಟ್‌ಗಳನ್ನು 24 ಗಂಟೆಗಳಲ್ಲಿ ಅಳಿಸಿ ಹಾಕುವಂತೆ ಕಾಂಗ್ರೆಸ್ ಮತ್ತು ಆಮ್‌ ಆದ್ಮಿ ಪಕ್ಷಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿತ್ತು.

ಈ ಸಂಬಂಧ ಗೌತಮ್‌ ಅವರು ಮಾನಹಾನಿ ದೂರು ದಾಖಲಿಸಿದ್ದರು. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಗೌತಮ್ ಅವರ ವಿರುದ್ಧ ಯಾವುದೇ ರೀತಿಯ ಹೇಳಿಕೆಗಳನ್ನು ಪೋಸ್ಟ್‌ ಮಾಡದಂತೆ ಎರಡೂ ಪಕ್ಷಗಳಿಗೆ ತಾಕೀತು ಮಾಡಿದ್ದರು.

ರಾಥೋರ್ ಬಂಧನ...

2026ರ ಜೂನ್‌ನಲ್ಲಿ ಅಂಕಿತಾಳ ಹತ್ಯೆ ಪ್ರಕರಣದಲ್ಲಿ 'ವಿಐಪಿ'ಯೊಬ್ಬರ ಹೆಸರನ್ನು ಪ್ರಸ್ತಾಪಿಸಲಾಗಿದೆ ಎನ್ನಲಾದ ವಿಡಿಯೊ-ಆಡಿಯೊ ಕ್ಲಿಪ್‌ಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ಅಜಯ್ ರಾಥೋರ್ ಅವರನ್ನು ಬಂಧಿಸಲಾಗಿತ್ತು.

ಈ ಪ್ರಕರಣ ಸಂಬಂಧ ಆಕ್ಷೇಪಾರ್ಹ ಆಡಿಯೊ ಮತ್ತು ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಆರೋಪದ ಮೇಲೆ ರಾಥೋರ್ ವಿರುದ್ಧ ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಬಳಿಕ ಉತ್ತರಾಖಂಡ ಹೈಕೋರ್ಟ್ ಎರಡು ಎಫ್‌ಐಆರ್‌ಗಳನ್ನು ರದ್ದುಗೊಳಿಸಿತ್ತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries