HEALTH TIPS

'ಮತಗಳ್ಳತನ'ದ ಪುರಾವೆ ಸಲ್ಲಿಸಲು ರಾಷ್ಟ್ರಪತಿ ಭೇಟಿಗೆ ಮತ್ತೆ 'ಇಂಡಿಯಾ' ಚಿಂತನೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿರುವ 'ಇಂಡಿಯಾ' ಮೈತ್ರಿಕೂಟ, 'ಮತಗಳ್ಳತನ'ಕ್ಕೆ ಸಂಬಂಧಿಸಿದ ಪುರಾವೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಲು ಮತ್ತೊಮ್ಮೆ ಭೇಟಿಗೆ ಸಮಯ ಕೇಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಭಟನೆಯ ಮುಂದಿನ ಹಂತದ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ನವೆಂಬರ್ 1ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ರ‍್ಯಾಲಿಯ ಬಳಿಕ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಪ್ರತಿಭಟನೆಯನ್ನು ಹೇಗೆ ಮುಂದುವರಿಸಬೇಕು ಎಂಬ ಬಗ್ಗೆ ಹಿರಿಯ ವಿಪಕ್ಷ ನಾಯಕರು ಪ್ರಾಥಮಿಕ ಚರ್ಚೆ ನಡೆಸಿದ್ದಾರೆ.

ಭಾನುವಾರ ಮಧ್ಯಾಹ್ನ 12 ಗಂಟೆಗೆ ಮಿಂಟೊ ರಸ್ತೆಯಿಂದ ರಾಮಲೀಲಾ ಮೈದಾನದವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಲಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಅಕ್ಟೋಬರ್ 9ರಂದು ರಾಷ್ಟ್ರಪತಿ ಮುರ್ಮು ಅವರನ್ನು 'ಇಂಡಿಯಾ' ಮೈತ್ರಿಕೂಟದ ನಿಯೋಗವು ಭೇಟಿಯಾಗಿತ್ತು. ಆ ವೇಳೆ ಮತಗಳ್ಳತನಕ್ಕೆ ಪುರಾವೆ ಒದಗಿಸಿ ಎಂದು ಸೂಚಿಸಿದ್ದರಿಂದ ಮತ್ತೆ ಭೇಟಿಗೆ ಸಮಯ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಭೇಟಿಗೆ ಅವಕಾಶ ದೊರೆತರೆ, ಮತದಾರರ ಪಟ್ಟಿಯಿಂದ ವಿನಾಕಾರಣ ಅಳಿಸಲಾಗಿದೆ ಎನ್ನಲಾದ ಮತದಾರರ ವಿವರಗಳನ್ನು ವಿಪಕ್ಷ ನಾಯಕರು ರಾಷ್ಟ್ರಪತಿಗಳಿಗೆ ಸಲ್ಲಿಸುವ ಸಾಧ್ಯತೆಯಿದೆ.

ಅಕ್ಟೋಬರ್ 9ರಂದು 'ಇಂಡಿಯಾ' ಮೈತ್ರಿಕೂಟದ ನಾಯಕರು ರಾಷ್ಟ್ರಪತಿ ಭವನದತ್ತ ಮೆರವಣಿಗೆ ನಡೆಸಿದ್ದರು. ಬಳಿಕ ನಿಯೋಗವೊಂದು ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಕಳೆದ ಎರಡು ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳನ್ನು ರದ್ದುಗೊಳಿಸುವುದು, ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕುವುದು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದು ಮತ್ತು ಮತಪತ್ರಗಳ ಮೂಲಕ ಚುನಾವಣೆ ನಡೆಸುವ ಪದ್ಧತಿಯನ್ನು ಮರುಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮನವಿಯಲ್ಲಿ ಮುಂದಿಡಲಾಗಿತ್ತು.

ಆ ಭೇಟಿಯ ಬಳಿಕ ಮಾತನಾಡಿದ್ದ ರಾಹುಲ್ ಗಾಂಧಿ, 'ಮತಗಳ್ಳತನ'ದ ಕುರಿತು ತಾವು ಮುಂದಿಟ್ಟ ಆರೋಪಗಳನ್ನು ರಾಷ್ಟ್ರಪತಿಗಳು ನಿರಾಕರಿಸದಿರುವುದು, ಪ್ರಶ್ನಿಸದಿರುವುದು ಅಥವಾ ಆಕ್ಷೇಪ ವ್ಯಕ್ತಪಡಿಸದಿರುವುದು ತಮಗೆ ಅಚ್ಚರಿ ಮೂಡಿಸಿದೆ. ಆದರೆ, ಆರೋಪಗಳಿಗೆ ಪುರಾವೆ ಒದಗಿಸುವಂತೆ ಅವರು ಕೇಳಿದ್ದಾರೆ ಎಂದು ಹೇಳಿದ್ದರು.

ಇದೇ ವೇಳೆ, ಶನಿವಾರವೂ ಮಳೆ ಮುಂದುವರಿದರೆ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ 'ಸಾರ್ವಜನಿಕ ದೋಷಾರೋಪಣೆ' ಕಾರ್ಯಕ್ರಮವನ್ನು ಹೇಗೆ ನಡೆಸುವುದು ಎಂಬ ಬಗ್ಗೆ ಶುಕ್ರವಾರ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರ ನಡೆಯಬೇಕಿದ್ದ ಕಾರ್ಯಕ್ರಮವನ್ನು ಮಳೆಯ ಕಾರಣ ಒಂದು ದಿನ ಮುಂದೂಡಲಾಗಿತ್ತು.

ಕಾರ್ಯಕ್ರಮವನ್ನು ದೀಪಾವಳಿ ನಂತರಕ್ಕೆ ಮುಂದೂಡಬಹುದು ಎಂದು ಕೆಲವು ಎಡಪಕ್ಷಗಳ ನಾಯಕರು ಸಲಹೆ ನೀಡಿದ್ದರು. ಆದರೆ, ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿರುವುದರಿಂದ ಆ ಸಲಹೆಯನ್ನು ಒಪ್ಪಿಕೊಳ್ಳಲಿಲ್ಲ. ಶನಿವಾರವೇ ಕಾರ್ಯಕ್ರಮ ನಡೆಸಬೇಕು ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಒತ್ತಾಯಿಸಿದರು. ಮಳೆ ಬಂದರೆ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸುವಂತಹ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದೂ ಅವರು ಸಲಹೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries