HEALTH TIPS

'ಮೊದಲು ರಾಜೀನಾಮೆ ನೀಡಿ': ರಾಹುಲ್ ಗಾಂಧಿಗೆ ಚಿರಾಗ್ ಪಾಸ್ವಾನ್ ಸವಾಲು

 ನವದೆಹಲಿ:  ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೊದಲು ರಾಜೀನಾಮೆ ನೀಡಲಿ ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಸವಾಲು ಹಾಕಿದ್ದಾರೆ. ಇದೇ ಚುನಾವಣಾ ಪ್ರಕ್ರಿಯೆಯ ಮೂಲಕ ರಾಹುಲ್ ಗಾಂಧಿ ರಾಯ್ ಬರೇಲಿ ಕ್ಷೇತ್ರದಿಂದ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.


SIR ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಖಂಡಿಸಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಬಲಪ್ರಯೋಗ ಮಾಡಿರುವುದನ್ನು ಪಾಸ್ವಾನ್ ಖಂಡಿಸಿದ್ದಾರೆ. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಯಾವುದೇ ಕಾರಣಕ್ಕೂ ಸಮರ್ಥಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ SIR ಪ್ರಕ್ರಿಯೆ ಹಿಂಪಡೆಯಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಿಲ್ಲಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

'ವಿದ್ಯಾರ್ಥಿಗಳ ವಿರುದ್ಧವಾಗಲಿ, ಬೇರೆ ಯಾರ ವಿರುದ್ಧವಾಗಲಿ ಇಂತಹ ಬಲಪ್ರಯೋಗವನ್ನು ನಾನು ಬೆಂಬಲಿಸುವುದಿಲ್ಲ. ದೌರ್ಜನ್ಯವನ್ನು ಖಂಡಿತವಾಗಿಯೂ ಸಮರ್ಥಿಸುವುದಿಲ್ಲ' ಎಂದು ಪಾಸ್ವಾನ್ ಹೇಳಿದ್ದಾರೆ.

ಆದರೆ, ಘಟನೆಯನ್ನು ಒಂದೇ ದೃಷ್ಟಿಕೋನದಿಂದ ನೋಡಬಾರದು ಎಂದು ಎಚ್ಚರಿಸಿರುವ ಅವರು, ಪ್ರತಿಭಟನೆಗಳ ನಡುವೆ ಸಮಾಜವಿರೋಧಿ ಶಕ್ತಿಗಳು ನುಸುಳಿ ಸಂಘರ್ಷಕ್ಕೆ ಪ್ರಚೋದನೆ ನೀಡುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದಾರೆ.

'ಘಟನೆ ಎಲ್ಲಿ ನಡೆಯಿತು, ನಿಖರವಾಗಿ ಏನಾಯಿತು ಮತ್ತು ಯಾವ ಸಂದರ್ಭಗಳಲ್ಲಿ ನಡೆಯಿತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಸಮಾಜವಿರೋಧಿ ಶಕ್ತಿಗಳು ವಿದ್ಯಾರ್ಥಿಗಳು ಮತ್ತು ಯುವಕರನ್ನು ಗುರಾಣಿಯನ್ನಾಗಿ ಬಳಸಿಕೊಂಡು ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿಯಬಹುದು. ಪೊಲೀಸರಿಗೂ ಕುಟುಂಬಗಳಿವೆ ಎಂಬುದನ್ನು ಮರೆಯಬಾರದು' ಎಂದು ಹೇಳಿದ್ದಾರೆ.

ಪ್ರತಿಭಟನಾಕಾರರು ಅಥವಾ ಆಡಳಿತದ ಕಡೆಯಿಂದ ಪರಿಸ್ಥಿತಿ ಉಲ್ಬಣಗೊಳ್ಳಬಾರದು . ಪ್ರಚೋದನೆಯ ನೆಪದಲ್ಲಿ ಬಲಪ್ರಯೋಗವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ . 'ಅರಾಜಕತೆ ಸೃಷ್ಟಿಸಲು ಕೆಲವು ಸಮಾಜವಿರೋಧಿ ಶಕ್ತಿಗಳು ಪ್ರತಿಭಟನೆಗಳನ್ನು ಬಳಸಿಕೊಳ್ಳುತ್ತವೆ. ಅವರು ಪೊಲೀಸರ ಮೇಲೆ ಕೈಮಾಡುವುದು ತಪ್ಪು. ಅದೇ ರೀತಿ, ಪ್ರಚೋದನೆಯಿಂದ ಅಥವಾ ಇತರ ಕಾರಣಗಳಿಂದ ಆಡಳಿತವು ಕಠಿಣ ಕ್ರಮ ಕೈಗೊಳ್ಳುವುದೂ ಸೂಕ್ತವಲ್ಲ' ಎಂದು ಪಾಸ್ವಾನ್ ಹೇಳಿದ್ದಾರೆ.

SIR ವಿಚಾರವನ್ನು ಪದೇ ಪದೇ ಪ್ರಸ್ತಾಪಿಸುತ್ತಿರುವ ರಾಹುಲ್ ಗಾಂಧಿ ವಿರುದ್ಧ ಪಾಸ್ವಾನ್ ಟೀಕಾಪ್ರಹಾರ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು ಈ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

'ರಾಹುಲ್ ಗಾಂಧಿ ಎಲ್ಲದರಲ್ಲೂ ರಾಜಕೀಯ ಆಯಾಮವನ್ನು ಹುಡುಕುತ್ತಾರೆ. ಈ ವಿಚಾರವನ್ನು ಇಷ್ಟೊಂದು ಮಟ್ಟಿಗೆ ರಾಜಕೀಯಗೊಳಿಸುವುದು ಮತ್ತು ಪದೇ ಪದೇ ಪತ್ರಿಕಾಗೋಷ್ಠಿಗಳನ್ನು ನಡೆಸುವುದು ಅವರ ಆದ್ಯತೆಗಳ ಬಗ್ಗೆ ಪ್ರಶ್ನೆ ಮೂಡಿಸುತ್ತದೆ' ಎಂದು ಹೇಳಿದ್ದಾರೆ.

'ಮೊದಲು ನೀವೇ ರಾಜೀನಾಮೆ ನೀಡಿ. ಇದೇ ಚುನಾವಣಾ ಪ್ರಕ್ರಿಯೆಯ ಮೂಲಕ ನೀವು ರಾಯ್ ಬರೇಲಿಯಿಂದ ಗೆದ್ದಿದ್ದೀರಿ. ನಿಮ್ಮ ಸಹೋದರಿ ಪ್ರಿಯಾಂಕಾ ವಯನಾಡ್ನಿಂದ ಗೆದ್ದಿದ್ದಾರೆ. ನಿಮ್ಮ 99 ಸಂಸದರೂ ಇದೇ ಪ್ರಕ್ರಿಯೆಯ ಮೂಲಕ ಗೆಲುವು ಸಾಧಿಸಿದ್ದಾರೆ' ಎಂದು ಪಾಸ್ವಾನ್ ಹೇಳಿದ್ದಾರೆ.

ಇದೇ ವೇಳೆ, ಪ್ರತಿಭಟನೆಯ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿಗಳನ್ನು ರಾಹುಲ್ ಗಾಂಧಿ ಬುಧವಾರ ದಿಲ್ಲಿಯ ಜನಪಥ್ನಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಭೇಟಿಯಾದರು.

ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಅಡ್ಡಿಪಡಿಸದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ ಅವರು, ವಿದ್ಯಾರ್ಥಿಗಳನ್ನು 'ದೇಶದ ಧ್ವನಿ' ಎಂದರು. ಕಾಂಗ್ರೆಸ್ ಅವರ ಬೆಂಬಲಕ್ಕೆ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ್ದಾರೆ ಎನ್ನಲಾದ ಹಲ್ಲೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸುವಂತೆ ವಿದ್ಯಾರ್ಥಿಗಳಿಗೆ ರಾಹುಲ್ ಸೂಚಿಸಿದರು.

'ಪ್ರತಿಯೊಬ್ಬ ವಿದ್ಯಾರ್ಥಿಯೂ ವೀಡಿಯೊಗಳನ್ನು ಚಿತ್ರೀಕರಿಸಿ, ಸಾಕ್ಷ್ಯಗಳನ್ನು ತಮ್ಮ ಬಳಿ ಇಟ್ಟುಕೊಂಡು ನಮಗೆ ಕಳುಹಿಸಬೇಕು ಎಂದು ಸೂಚಿಸಿದ್ದೇನೆ. ಘಟನೆ ಪೂರ್ಣಗೊಂಡ ಬಳಿಕ ನಮಗೆ ನ್ಯಾಯ ಸಿಗಲಿದೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ನರೇಂದ್ರ ಮೋದಿ, ಅಮಿತ್ ಶಾ, ಜ್ಞಾನೇಶ್ ಕುಮಾರ್ ಅವರಿಂದ ಹಿಡಿದು ವಿದ್ಯಾರ್ಥಿಗಳ ಮೇಲೆ ಕೈ ಎತ್ತಿದ ಕಾನ್ಸ್ಟೆಬಲ್ಗಳವರೆಗೆ ಎಲ್ಲರನ್ನೂ ಶಿಕ್ಷಿಸುತ್ತೇವೆ' ಎಂದು ರಾಹುಲ್ ಹೇಳಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries