ನವದೆಹಲಿ: ಸಂವಿಧಾನದ 21ನೇ ವಿಧಿಯಡಿ ಮುಟ್ಟಿನ ನೈರ್ಮಲ್ಯವನ್ನು ಮೂಲಭೂತ ಜೀವಿಸುವ ಹಕ್ಕಿನ ಒಂದು ಭಾಗ ಎಂದು ಘೋಷಿಸಿರುವ ತನ್ನ ತೀರ್ಪನ್ನು ಜಾರಿಗೆ ತರಲು ಕೈಗೊಂಡ ಕ್ರಮಗಳ ಕುರಿತು ಕೇಂದ್ರ ಸರಕಾರಕ್ಕೆ ಮಾಹಿತಿ ನೀಡದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.
ಕೇಂದ್ರ ಸರಕಾರಕ್ಕೆ ಮಾಹಿತಿ ಒದಗಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯಾಲಯ ಕೊನೆಯ ಅವಕಾಶ ನೀಡಿದೆ. ಪ್ರತಿಕ್ರಿಯಿಸಲು ವಿಫಲವಾದರೆ ಸಂಬಂಧಪಟ್ಟ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಬೇಕಾಗಬಹುದು ಎಂದು ಅದು ಎಚ್ಚರಿಕೆ ನೀಡಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ನಿಗದಿಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠ, ''ನಾವು ತೀರ್ಪಿನಲ್ಲಿ ಹೇಳಿರುವುದು ಕೇವಲ ಕಾಗದದಲ್ಲಷ್ಟೇ ಉಳಿಯುವುದಾದರೆ, ಈ ಮೂಲಭೂತ ಹಕ್ಕಿಗೆ ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಹೇಗೆ ಪರಿಣಾಮಕಾರಿಯಾಗಿ ಜೀವ ತುಂಬುತ್ತವೆ?'' ಎಂದು ಪ್ರಶ್ನಿಸಿದೆ.
ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಗೆ ಸಂಬಂಧಿಸಿದ 21ನೇ ವಿಧಿಯಡಿ ರಕ್ಷಿಸಲ್ಪಟ್ಟ ಹಕ್ಕುಗಳಲ್ಲಿ ಮುಟ್ಟಿನ ನೈರ್ಮಲ್ಯ ಮತ್ತು ಮುಟ್ಟಿನ ಆರೋಗ್ಯವೂ ಸೇರಿವೆ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ ಎಂದು ಪೀಠ ತಿಳಿಸಿದೆ.



