ತಿರುವನಂತಪುರಂ: ರಾಜ್ಯದಲ್ಲಿ ಬಾರ್‌ಗಳಿಗೆ ಬಂದು ಮದ್ಯ ಸೇವಿಸುವ ಅಥವಾ ಖರೀದಿಸುವ ಗ್ರಾಹಕರ ವಯಸ್ಸಿನ ಬಗ್ಗೆ ಕಿಂಚಿತ್ತಾದರೂ ಅನುಮಾನ ಕಂಡುಬಂದರೆ, ಅಂತಹವರ ಆಧಾರ್ ಕಾರ್ಡ್ ಸೇರಿದಂತೆ ಅಧಿಕೃತ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ಪರಿಶೀಲಿಸಿದ ನಂತರವಷ್ಟೇ ಮದ್ಯ ವಿತರಿಸಬೇಕು ಎಂದು ಅಬಕಾರಿ ಇಲಾಖೆ ಖಡಕ್ ಸೂಚನೆ ನೀಡಿದೆ.
ನೆಡುಂಬಾಶ್ಶೇರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದ ಹಿನ್ನೆಲೆಯಲ್ಲಿ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕೇರಳ ಅಬಕಾರಿ ನಿಯಮಗಳ ಪ್ರಕಾರ ಮದ್ಯ ಸೇವನೆ ಹಾಗೂ ಖರೀದಿಗೆ ಕನಿಷ್ಠ ವಯೋಮಿತಿ 23 ವರ್ಷಗಳು.
ಮದ್ಯ ಸೇವಿಸಿ ಅತಿವೇಗ ಹಾಗೂ ಬೇಜವಾಬ್ದಾರಿಯಿಂದ ವಾಹನ ಚಲಾಯಿಸುವುದರಿಂದ ಅಮಾಯಕ ಜೀವಗಳು ಬಲಿಯಾಗುತ್ತಿದ್ದು, ಕುಟುಂಬಗಳು ಬೀದಿಗೆ ಬೀಳುತ್ತಿವೆ. ಇಂತಹ ಘಟನೆಗಳಿಗೆ ಆಸ್ಪದ ನೀಡುವ ಬಾರ್‌ಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಕಾನೂನುಬದ್ಧ ವಯೋಮಿತಿಗಿಂತ ಕಡಿಮೆ ವಯಸ್ಸಿನ ಯುವಕರಿಗೆ ಮದ್ಯ ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದು, ಗ್ರಾಹಕರ ವಯಸ್ಸನ್ನು ಖಚಿತಪಡಿಸಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಆಯಾ ಬಾರ್ ಆಡಳಿತ ಮಂಡಳಿಯದ್ದೇ ಆಗಿರುತ್ತದೆ. ಈ ನಿಯಮವನ್ನು ಉಲ್ಲಂಘಿಸಿ ಅಪ್ರಾಪ್ತರಿಗೆ ಮದ್ಯ ಪೂರೈಕೆ ಮಾಡುವುದು ಕಂಡುಬಂದರೆ ಅಂತಹ ಬಾರ್‌ಗಳ ಪರವಾನಗಿ (ಲೈಸೆನ್ಸ್) ರದ್ದುಪಡಿಸುವುದಾಗಿ ಅಬಕಾರಿ ಇಲಾಖೆ ಸ್ಪಷ್ಟಪಡಿಸಿದೆ.

