HEALTH TIPS

ಮೇಲ್ಛಾವಣಿಯಿಲ್ಲದ ಹೊಸಂಗಡಿಯಲ್ಲಿ ಬಸ್ ತಂಗುದಾಣ; ಬಿಸಿಲಿನಲ್ಲಿ ಪ್ರಯಾಣಿಕರ ಪರದಾಟ

**ಮಂಗಳೂರು ಕಡೆಗೆ ತೆರಳುವ ಪ್ರಯಾಣಿಕರಿಗೆ ತೊಂದರೆ | ವಿದ್ಯಾರ್ಥಿಗಳು, ವೃದ್ಧರು ಮತ್ತು ರೋಗಿಗಳು ಸಂಕಷ್ಟದಲ್ಲಿ**

ಮಂಜೇಶ್ವರ: ಮಂಜೇಶ್ವರ ತಾಲೂಕಿನ ಜನನಿಬಿಡ ವಾಣಿಜ್ಯ ಕೇಂದ್ರವಾದ ಹೊಸಂಗಡಿಯಲ್ಲಿ ಬಸ್‍ಗಾಗಿ ಕಾಯುವ ಪ್ರಯಾಣಿಕರಿಗೆ ಸೂಕ್ತ ತಂಗುದಾಣದ ಸೌಲಭ್ಯವಿಲ್ಲದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಬಳಿಕವೂ ಮಂಗಳೂರು ಕಡೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಮೇಲ್ಛಾವಣಿ ಹೊಂದಿರುವ ಬಸ್ ತಂಗುದಾಣ ನಿರ್ಮಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.


ಹೊಸಂಗಡಿಯ ಪಶ್ಚಿಮ ಭಾಗದಲ್ಲಿ ಬಸ್‍ಗಾಗಿ ಕಾಯುವ ಪ್ರಯಾಣಿಕರಿಗೆ ಉದ್ದವಾದ ಆಸನದ ವ್ಯವಸ್ಥೆ ಮಾಡಲಾಗಿದೆ. ಆದರೆ, ಅದರ ಮೇಲೆ ಮೇಲ್ಛಾವಣಿ ಇಲ್ಲದ ಕಾರಣ ಪ್ರಯಾಣಿಕರು ಸುಡುಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತಿಲ್ಲ. ತಲಪಾಡಿ ಮೂಲಕ ಮಂಗಳೂರು ಕಡೆಗೆ ತೆರಳುವ ಪ್ರಯಾಣಿಕರು ಪ್ರತಿದಿನ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ವಿದ್ಯಾರ್ಥಿಗಳು, ವೃದ್ಧರು, ರೋಗಿಗಳಿಗೆ ಸಂಕಷ್ಟ:

ಹೊಸಂಗಡಿಯ ಪಶ್ಚಿಮ ಭಾಗದಲ್ಲಿ ಹಲವು ಸರ್ಕಾರಿ ಕಚೇರಿಗಳಿರುವುದರಿಂದ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಬಸ್‍ಗಾಗಿ ಕಾಯುತ್ತಾರೆ. ಕೈಯಲ್ಲಿ ಪುಟ್ಟ ಮಕ್ಕಳನ್ನು ಹೊತ್ತು ಬರುವ ಮಹಿಳೆಯರು, ವೃದ್ಧರು ಮತ್ತು ಮಂಗಳೂರಿನ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ತೆರಳುವ ರೋಗಿಗಳು ಬಿಸಿಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.

ದೀರ್ಘಕಾಲ ಬಿಸಿಲಿನಲ್ಲಿ ಕಾಯುವುದರಿಂದ ಪ್ರಯಾಣಿಕರು ಅಸ್ವಸ್ಥರಾಗುವ ಪರಿಸ್ಥಿತಿಯೂ ನಿರ್ಮಾಣವಾಗುತ್ತಿದೆ. ಹೀಗಾಗಿ, ಕೇವಲ ಆಸನದ ವ್ಯವಸ್ಥೆ ಮಾಡಿರುವುದರಿಂದ ಪ್ರಯಾಣಿಕರ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.

ಎದುರುಭಾಗದಲ್ಲಿ ಸುಸಜ್ಜಿತ ತಂಗುದಾಣ:

ಇದೇ ರಸ್ತೆಯ ಎದುರುಭಾಗದಲ್ಲಿ ಕಾಸರಗೋಡು, ಉಪ್ಪಳ ಮತ್ತು ಕುಂಬಳೆ ಕಡೆಗೆ ತೆರಳುವ ಪ್ರಯಾಣಿಕರಿಗಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಸ್ಥೆಯ ವತಿಯಿಂದ ಬಸ್ ತಂಗುದಾಣ ನಿರ್ಮಿಸಲಾಗಿದೆ. ಆದರೆ ಮಂಗಳೂರು ಕಡೆಗೆ ತೆರಳುವ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹ:

ಹೊಸಂಗಡಿಯ ಪಶ್ಚಿಮ ಭಾಗದಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಪರಿಗಣಿಸಿ, ವಿಶಾಲವಾದ ಆಸನ ವ್ಯವಸ್ಥೆ ಹಾಗೂ ಮೇಲ್ಛಾವಣಿ ಹೊಂದಿರುವ ಸುರಕ್ಷಿತ ಬಸ್ ತಂಗುದಾಣವನ್ನು ತಕ್ಷಣ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಮತ್ತು ರೋಗಿಗಳ ಅನುಕೂಲಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.


ಅಭಿಮತ:

-ಮಂಗಳೂರು, ಮಂಜೇಶ್ವರ ಒಳ ಪೇಟೆಗಳತ್ತ ತೆರಳುವ ಹೆದ್ದಾರಿ ಪಕ್ಕ ಮೂಲ ಸೌಕರ್ಯಗಳಿಲ್ಲದ ತಂಗುದಾಣ ನಿರ್ಮಿಸದಿರುವುದು ಖಂಡನೀಯ. ಮಕ್ಕಳನ್ನು ಎತ್ತಿಕೊಂಡು ನಿಂತಿರುವ ಮಹಿಳೆಯರು, ವೃದ್ಧರ ಸ್ಥಿತಿ ತೀವ್ರ ಬಿಸಿಲಿನ ಈ ಕಾಲದಲ್ಲಿ ತೀವ್ರ ಬೇಸರ ತರಿಸುತ್ತಿದೆ. ಆದರೆ ಜನಪ್ರತಿನಿಧಿಗಳಾಗಲಿ, ಹೆದ್ದಾರಿ ಪ್ರಾಧಿಕಾರವಾಗಲಿ ಈ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಅಚ್ಚರಿ ತಂದಿದೆ. ಈ ಬಗ್ಗೆ ಅಟೋ ಚಾಲಕರ ಸಂಘಟನೆ ಮೂಲಕ ಸಂಬಂಧಪಟ್ಟವರನ್ನು ಎಚ್ಚರಿಸಲಾಗುವುದು.

-ಶೈಲೇಶ್ ಕುಮಾರ್

ಹೊಸಂಗಡಿ ಪೇಟೆಯ ಅಟೋ ಚಾಲಕ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries