ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹೂಥಿ ಬಂಡುಕೋರರು ಭಾನುವಾರ ಮತ್ತೆ ದಾಳಿ ನಡೆದಿದ್ದು, ಓರ್ವ ಮೃತಪಟ್ಟು 11 ಮಂದಿ ಗಾಯಗೊಂಡಿದ್ದಾರೆ ಎಂದು 'ಎಎಫ್‌ಪಿ' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶನಿವಾರ ತಡರಾತ್ರಿ ನಡೆದ ದಾಳಿಯಲ್ಲಿ 12 ಮಂದಿ ಸಾವಿಗೀಡಾಗಿ 300ಕ್ಕೂ ಅಧಿಕ ಮಾಂದಿ ಗಾಯಗೊಂಡಿದ್ದರು.
ಆ ದಾಳಿ ಬೆನ್ನಲ್ಲೇ ಏರ್‌ಪೋರ್ಟ್ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.
ಶನಿವಾರ ನಡೆದ ದಾಳಿಯು, ಕಳೆದೊಂದು ದಶಕದಲ್ಲಿ ಸೌದಿಯಲ್ಲಿ ನಡೆದ ಅತ್ಯಂತ ದೊಡ್ಡ ದಾಳಿಯಾಗಿದೆ.
ಏರ್‌ಪೋರ್ಟ್ ಸೇರಿ ಕಳೆದ 24 ಗಂಟೆಯಲ್ಲಿ ಹಲವು ದಾಳಿ ನಡೆಸಿದ್ದಾಗಿ ಇರಾನ್ ಬೆಂಬಲಿತ ಹೂಥಿ ಬಂಡುಕೋರರು ತಿಳಿಸಿದ್ದು, ಸೌದಿಯ ಸಾರಿಗೆ ವ್ಯವಸ್ಥೆಯನ್ನು ಗುರಿಯಾಗಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದೆ. ಅದನ್ನು 'ನಮ್ಮ ಪಡೆಗಳ ಕಾರ್ಯಾಚರಣೆಯ ರಂಗಭೂಮಿ' ಎಂದು ಬಣ್ಣಿಸಿದೆ.
ಕಿಂಗ್ ಖಾಲಿದ್ ಏರ್‌ಪೋರ್ಟ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಸೌದಿ ನೇತೃತ್ವದ ಒಕ್ಕೂಟ ತಿಳಿಸಿದೆ. ಅಲ್ಲದೆ ಸಮೀಪವೇ ಒಂದು ಕ್ಷಿಪಣಿಯನ್ನು ವಿಫಲಗೊಳಿಸಲಾಗಿದೆ. ಹೊಸ ದಾಳಿಯಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿ ಮೃತಪಟ್ಟಿದ್ದಾರೆ. 11 ಮಂದಿಗೆ ಗಾಯಗಳಾಗಿವೆ. ದಾಳಿಯಿಂದಾಗಿ ಆಸ್ತಿಗಳಿಗೆ ಹಾನಿ ಉಂಟಾಗಿದ್ದು, ಪ್ರಮಾಣವನ್ನು ಲೆಕ್ಕಹಾಕಲಾಗುತ್ತಿದೆ ಎಂದು ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
'ಮುಂದಿನ 24 ಗಂಟೆ ಏರ್‌ಪೋರ್ಟ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ' ಎಂದು ಫ್ಲೈಟ್‌ರಡಾರ್ 24 ತಿಳಿಸಿದೆ.
ಹಲವು ಸ್ಫೋಟದ ಸದ್ದು ಕೇಳಿದ್ದಾಗಿ ಸ್ಥಳೀಯರು ಹಾಗೂ ಎಎಫ್‌ಪಿಯ ಪತ್ರಕರ್ತರು ತಿಳಿಸಿದ್ದಾರೆ.
ಸ್ಫೋಟದ ಸದ್ದಿಗೆ ಪಕ್ಷಿಗಳು ಸದ್ದು ಮಾಡಿಕೊಂಡು ಕಕ್ಕಾಬಿಕ್ಕಿಯಾಗಿ ಹಾರಿದವು, ನಮ್ಮ ಮನೆ ನಲುಗಿತು' ಎಂದು ಅಲ್-ಅರಾಯಿದ್ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಪೂರ್ವ ಭಾಗದಲ್ಲಿರುವ ದಮ್ಮಾಮ್ ವಿಮಾನ ನಿಲ್ದಾಣದ ಮೇಲೆ ಮತ್ತೊಂದು ದಾಳಿ ನಡೆದಿರುವುದಾಗಿಯೂ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ತಾವೇ ದಾಳಿ ಮಾಡಿದ್ದಾಗಿ ಹೂಥಿಗಳು ಹೇಳಿಕೊಂಡಿದ್ದಾರೆ.
ಇದಾದ ಸ್ವಲ್ಪ ಸಮಯದ ಬಳಿಕ, ಪೂರ್ವ ಭಾಗದಲ್ಲೇ ಒಂದು ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಸೌದಿ ಒಕ್ಕೂಟ ತಿಳಿಸಿದೆ. ಪ್ರಮುಖ ಸೇನಾ ನೆಲೆಯಿರುವ ದಕ್ಷಿಣ ಸೌದಿ ಅರೇಬಿಯಾದ ಖಮೀಸ್ ಮುಶೈತ್ ನಗರದತ್ತ ಬರುತ್ತಿದ್ದ ಹೂಥಿಗಳ ಗುರಿನಿರ್ದೇಶಿತ ಕ್ಷಿಪಣಿಯೊಂದನ್ನು ಸೋಮವಾರ ಮುಂಜಾನೆ ತಡೆದು ನಾಶಪಡಿಸಿರುವುದಾಗಿಯೂ ಒಕ್ಕೂಟ ತಿಳಿಸಿದೆ.



