ಕಟಕ್: ಮೇ ತಿಂಗಳಿನಿಂದ ಪಾರಾದೀಪ್ ಬಂದರಿನ ಬಳಿ ಅತಂತ್ರವಾಗಿರುವ ವಿದೇಶಿ ತೈಲ ಟ್ಯಾಂಕರ್ 'ಎಂಟಿ ಯೂನಿಟಿ'ಯ ಸಿಬ್ಬಂದಿಯನ್ನು ಹಡಗಿನಿಂದ ಕೆಳಗಿಳಿಸಿ, ಸ್ವದೇಶಕ್ಕೆ ವಾಪಸ್ ಕಳುಹಿಸಿ ಎಂದು ಒಡಿಶಾ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ಇತರ ಪ್ರಾಧಿಕಾರಗಳಿಗೆ ಸೂಚಿಸಿದೆ.
ಇದಕ್ಕಾಗಿ ಮೂರು ವಾರಗಳ ಗಡುವು ನಿಗದಿ ಮಾಡಿದೆ.
ಹಡಗಿನ ಮಾಸ್ಟರ್ (ಕ್ಯಾಪ್ಟನ್) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಕೆ.ಪಟ್ನಾಯಕ್ ಅವರು ಅಕ್ಟೋಬರ್ 6ರಂದು ಈ ಆದೇಶ ಹೊರಡಿಸಿದ್ದಾರೆ.
ನಾವಿಕರಿಗೆ ವೇತನ ಪಾವತಿಸಲು, ಅಗತ್ಯ ಆಹಾರ ಪದಾರ್ಥಗಳನ್ನು ಒದಗಿಸಲು ಅಥವಾ ತಾಯ್ನಾಡಿಗೆ ಮರಳಲು ವ್ಯವಸ್ಥೆ ಮಾಡಲು ಮಾಲೀಕರು ವಿಫಲರಾಗಿದ್ದರಿಂದ, ಮರ್ಚೆಂಟ್ ಶಿಪ್ಪಿಂಗ್ ಕಾಯ್ದೆ (ವಾಣಿಜ್ಯ ಹಡಗು ಕಾಯ್ದೆ) ಅಡಿಯಲ್ಲಿ ನಾವಿಕರನ್ನು ಅತಂತ್ರರಾಗಿ ಬಿಟ್ಟು ಹೋಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
ಸಿಬ್ಬಂದಿಯನ್ನು ಹಡಗಿನಿಂದ ಇಳಿಸಲು ಮತ್ತು ಸ್ವದೇಶಕ್ಕೆ ಮರಳಿ ಕಳುಹಿಸಲು ವ್ಯವಸ್ಥೆ ಮಾಡಲು ಹಾಗೂ ಅವರ ಬದಲಿಗೆ ಹೊಸ ಸಿಬ್ಬಂದಿಯನ್ನು ನಿಯೋಜಿಸಲು ಅಧಿಕಾರಿಗಳಿಗೆ ನ್ಯಾಯಾಲಯವು ಸೂಚನೆ ನೀಡಿದೆ.
ಈ ವೆಚ್ಚಗಳನ್ನು ಮಾಲೀಕರಿಂದ ಅಥವಾ ಹೊಣೆಗಾರರೆಂದು ಕಂಡುಬಂದ ಇತರ ವ್ಯಕ್ತಿಗಳಿಂದ ವಸೂಲಿ ಮಾಡಬಹುದು ಎಂದು ತಿಳಿಸಿದೆ.
ಕೋಲ್ಕತ್ತದಲ್ಲಿರುವ ರಷ್ಯಾದ ಕಾನ್ಸುಲೇಟ್ ಜನರಲ್ ಪ್ರಕಾರ, ಹಡಗಿನಲ್ಲಿ ಮಾಸ್ಟರ್ ಸೇರಿದಂತೆ 23 ಮಂದಿ ಇದ್ದಾರೆ. ಈ ಪೈಕಿ 20 ಮಂದಿ ರಷ್ಯಾ ಪ್ರಜೆಗಳು, ಇಬ್ಬರು ಈಜಿಪ್ಟ್‌ನವರು ಮತ್ತು ಒಬ್ಬರು ಕಜಕಸ್ತಾನದವರು.



