ಗ್ಯಾಂಗ್‌ಟಾಕ್: ಅಂಕಿತಾ ಭಂಡಾರಿ ಕೊಲೆ ಪ್ರಕರಣದ 'ವಿಐಪಿ'ಗೆ ಸಂಬಂಧಿಸಿದ ವಿವಾದದ ನಡುವೆಯೇ ದುಷ್ಯಂತ್ ಕುಮಾರ್ ಗೌತಮ್ ಅವರು ಸೋಮವಾರ ಸಿಕ್ಕಿಂನ 19ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಗ್ಯಾಂಗ್‌ಟಾಕ್ ನ ಲೋಕ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್ ಅವರು ಗೌತಮ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಸಚಿವ ಸಂಪುಟದ ಸದಸ್ಯರು, ವಿಧಾನಸಭೆ ಸ್ಪೀಕರ್, ಹೈಕೋರ್ಟ್ ನ್ಯಾಯಮೂರ್ತಿಗಳು, ಲೋಕಸಭಾ ಸಂಸದರು, ಶಾಸಕರು ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಮಾಣ ವಚನ ಸ್ವೀಕಾರದ ಬಳಿಕ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ನೂತನ ರಾಜ್ಯಪಾಲರನ್ನು ಸಚಿವ ಸಂಪುಟದ ಸದಸ್ಯರು, ವಿಧಾನಸಭೆ ಸ್ಪೀಕರ್, ಶಾಸಕರು ಹಾಗೂ ಇತರ ಗಣ್ಯರಿಗೆ ಪರಿಚಯಿಸಿದರು. ಬಳಿಕ ಸಿಕ್ಕಿಂ ಸಶಸ್ತ್ರ ಪೊಲೀಸರು ರಾಜ್ಯಪಾಲರಿಗೆ ಸಾಂಪ್ರದಾಯಿಕ ಗೌರವ ವಂದನೆ ಸಲ್ಲಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಕ್ಟೋಬರ್ 12ರಂದು ದುಷ್ಯಂತ್ ಕುಮಾರ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದರು. ಅವರು ಓಂ ಪ್ರಕಾಶ್ ಮಾಥುರ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ನೇಮಕಕ್ಕೆ ವಿರೋಧ
ಗೌತಮ್ ಅವರ ನೇಮಕವನ್ನು ವಿರೋಧಿಸಿ ಕಳೆದ ವಾರ ಗ್ಯಾಂಗ್‌ಟಾಕ್ ನ ಜಿಲ್ಲಾ ಆಡಳಿತ ಕೇಂದ್ರದ ಬಳಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳದ ಯುವಕರು ಮತ್ತು ನಾಗರಿಕರು ಶಾಂತಿಯುತ ಧರಣಿ ನಡೆಸಿದ್ದರು.
2022ರಲ್ಲಿ ನಡೆದ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ ಪಾತ್ರದ ಕುರಿತು 'ವಿಐಪಿ' ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ. ಈ ತನಿಖೆ ಪೂರ್ಣಗೊಳ್ಳುವವರೆಗೆ ಗೌತಮ್ ಅವರ ನೇಮಕವನ್ನು ಮುಂದೂಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು.
ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮೊದಲೇ ಗೌತಮ್ ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದಕ್ಕೆ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿವಾದದ ನಡುವೆಯೇ ಅವರು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.



