ಢಾಕಾ: ಅಕ್ರಮ ಆಸ್ತಿ ಸಂಪಾದನೆ ಹಾಗೂ ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ಬಾಂಗ್ಲಾದೇಶದ ವಾಯುಪಡೆಯ ಮಾಜಿ ಮುಖ್ಯಸ್ಥ ಶೇಖ್ ಅಬ್ದುಲ್ ಹನ್ನಾನ್ ಅವರನ್ನು ಖತರ್ ಅಧಿಕಾರಿಗಳು ಅ. 15ರಂದು ಬಂಧಿಸಿದ್ದಾರೆ.
ಬಾಂಗ್ಲಾದೇಶದ ಭ್ರಷ್ಟಾಚಾರ ನಿಗ್ರಹ ಆಯೋಗದ (ಎಸಿಸಿ) ಪ್ರಕಾರ, ಹನ್ನಾನ್ ಅವರು ತಮ್ಮ ಆದಾಯದ ಮೂಲಗಳನ್ನು ಮೀರಿ 3.28 ಕೋಟಿ ಟಾಕಾಕ್ಕೂ ಹೆಚ್ಚು ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ.
ಅಲ್ಲದೆ, ತಮ್ಮ ಆರು ವೈಯಕ್ತಿಕ ಬ್ಯಾಂಕ್ ಖಾತೆಗಳ ಮೂಲಕ 27.63 ಕೋಟಿ ಟಾಕಾ ಮೊತ್ತದ ಅನುಮಾನಾಸ್ಪದ ವಹಿವಾಟು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹನ್ನಾನ್ ಬಂಧನದ ಕುರಿತು ಇಂಟರ್‌ಪೋಲ್ ಇಮೇಲ್ ಮೂಲಕ ಅಧಿಕೃತ ಮಾಹಿತಿ ನೀಡಿದೆ ಎಂದು ಎಸಿಸಿ ಉಪನಿರ್ದೇಶಕ ಎಂಡಿ ಅಖ್ತರುಲ್ ಇಸ್ಲಾಂ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ಆಯೋಗ ಕಾಯ್ದೆ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಆರೋಪಗಳನ್ನು ದಾಖಲಿಸಲು ಆಯೋಗವು ಕಳೆದ ವರ್ಷ ಜುಲೈನಲ್ಲಿ ಅನುಮೋದನೆ ನೀಡಿತ್ತು.
ಹನ್ನಾನ್ ಅವರ ಪತ್ನಿಯೂ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಪತಿಯ ಸಹಾಯದಿಂದ ತಮ್ಮ ಆದಾಯದ ತಿಳಿದ ಮೂಲಗಳನ್ನು ಮೀರಿ 1.91 ಕೋಟಿ ಟಾಕಾ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ ಎಂಬುದು ಅವರ ವಿರುದ್ಧದ ಆರೋಪಿಸಲಾಗಿದೆ. ಅವರ ಹೆಸರಿನಲ್ಲಿರುವ 32 ಬ್ಯಾಂಕ್ ಖಾತೆಗಳ ಮೂಲಕ 1.18 ಕೋಟಿ ಟಾಕಾ ಮೊತ್ತದ ಅನುಮಾನಾಸ್ಪದ ವಹಿವಾಟು ನಡೆದಿರುವುದನ್ನೂ ಎಸಿಸಿ ಪತ್ತೆಹಚ್ಚಿದೆ.
ವಿದೇಶಗಳಲ್ಲೂ ಆಸ್ತಿ ಪತ್ತೆ
ತನಿಖಾಧಿಕಾರಿಗಳು ಹನ್ನನ್ ಅವರಿಗೆ ಸೇರಿದ ಆಸ್ತಿಗಳನ್ನು ಕೆನಡಾ ಮತ್ತು ದುಬೈನಲ್ಲಿ ಪತ್ತೆಹಚ್ಚಿದ್ದಾರೆ. ಅಲ್ಲದೆ, ಮೂರು ಪ್ರತ್ಯೇಕ ದೇಶಗಳಲ್ಲಿ ಅವರ ಮಕ್ಕಳ ಹೆಸರಿನಲ್ಲಿ ನೋಂದಣಿಯಾಗಿರುವ ಆಸ್ತಿಗಳೂ ತನಿಖೆಯಲ್ಲಿ ಬೆಳಕಿಗೆ ಬಂದಿವೆ.
ಹನ್ನಾನ್ ಮತ್ತು ಅವರ ಪತ್ನಿಯ ಆದಾಯ ತೆರಿಗೆ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಢಾಕಾ ನ್ಯಾಯಾಲಯವು ಮಾರ್ಚ್ ನಲ್ಲಿ ಎಸಿಸಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ಆಧಾರದಲ್ಲಿ ಆದೇಶಿಸಿತ್ತು.
ಪ್ರಯಾಣ ನಿರ್ಬಂಧವಿದ್ದರೂ ಹಾಗೂ ತಮ್ಮ ವಿರುದ್ಧ ಹಲವು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದರೂ ಹನ್ನಾನ್ ಬಾಂಗ್ಲಾದೇಶದಿಂದ ಹೊರಹೋಗುವಲ್ಲಿ ಯಶಸ್ವಿಯಾಗಿದ್ದರು ಎಂದು ಎಸಿಸಿ ತಿಳಿಸಿದೆ. ಆದಾಯದ ತಿಳಿದ ಮೂಲಗಳನ್ನು ಮೀರಿ ಆಸ್ತಿ ಸಂಪಾದಿಸಿದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ ಸೇರಿದ ಎರಡು ಅಪಾರ್ಟ್ ಮೆಂಟ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಈ ಹಿಂದೆ ಆದೇಶಿಸಿತ್ತು.
2021ರಲ್ಲಿ ವಾಯುಪಡೆ ಮುಖ್ಯಸ್ಥರಾಗಿದ್ದ ಹನ್ನಾನ್
ಹನ್ನಾನ್ ಅವರು 1984ರಲ್ಲಿ ಬಾಂಗ್ಲಾದೇಶ ವಾಯುಪಡೆಗೆ ಜನರಲ್ ಡ್ಯೂಟಿ (ಜಿಡಿ) ಪೈಲಟ್ ಆಗಿ ಸೇರ್ಪಡೆಯಾಗಿದ್ದರು. 2021ರ ಜೂನ್ 12ರಂದು ವಾಯುಪಡೆಯ 16ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಅವರು, 2024ರ ಜೂನ್ 11ರಂದು ನಿವೃತ್ತರಾಗಿದ್ದರು.
ಬಾಂಗ್ಲಾದೇಶದ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಮೊಹಮ್ಮದ್ ನಜ್ಮುಲ್ ಹಸನ್ ಕೂಡ ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಅವರು ಪ್ರಸ್ತುತ ವಿದೇಶದಲ್ಲಿದ್ದು, ಅವರ ವಿರುದ್ಧ ಯಾವುದೇ ನ್ಯಾಯಾಲಯ ಪ್ರಯಾಣ ನಿರ್ಬಂಧ ವಿಧಿಸಿಲ್ಲ ಎಂದು ವರದಿಗಳು ಹೇಳಿವೆ.
ಹನ್ನಾನ್ ಮತ್ತು ಹಸನ್ ಇಬ್ಬರೂ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಆಡಳಿತದ ಅವಧಿಯಲ್ಲಿ ಸೇನಾಪಡೆಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಹನ್ನಾನ್ ಅವರು ಅವಾಮಿ ಲೀಗ್ ಸರಕಾರದ ಅವಧಿಯಲ್ಲೇ ನಿವೃತ್ತರಾದರೆ, ಹಸನ್ ಅವರು ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರಕಾರದ ಅವಧಿಯಲ್ಲಿ ನಿವೃತ್ತರಾಗಿದ್ದರು.



