ಇಂಫಾಲ (PTI): ಕುಕಿ ಸಮುದಾಯದ ಸದಸ್ಯರಿಗೆ ಸೇರಿದ್ದ ಪಾಳುಬಿದ್ದ ಹಲವು ಮನೆಗಳಿಗೆ ಶಂಕಿತ ಬಂಡುಕೋರರು ಬುಧವಾರ ಬೆಂಕಿ ಹಚ್ಚಿರುವ ಘಟನೆ ಮಣಿಪುರದ ಕಾಂಗ್ಪೋಕಿ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರದಿಂದ ನಿರ್ಮಿಸಲಾಗಿದ್ದ ಈ ಮನೆಗಳಿಗೆ ಬೆಂಕಿ ಹಚ್ಚುವ ಮೊದಲು ಹಲವು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು ಎಂದು ಹೇಳಿದ್ದಾರೆ.
ಕನಿಷ್ಠ ಮೂರು ಮನೆಗಳು ನಾಶವಾಗಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಸಾವು-ನೋವು ವರದಿಯಾಗಿಲ್ಲ ಮತ್ತು ಕೃತ್ಯ ಎಸಗಿದವರು ಯಾರು ಎಂದು ತಕ್ಷಣಕ್ಕೆ ತಿಳಿದುಬಂದಿಲ್ಲ.


