ವಿಶ್ವಸಂಸ್ಥೆ: ದೇಶದ ಯುವಕರು ರಚಿಸಿದ ವಿಡಂಬನಾತ್ಮಕ ರಾಜಕೀಯ ಚಳುವಳಿಯನ್ನು ಉಲ್ಲೇಖಿಸಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರೊಬ್ಬರು ನೀಡಿದ್ದ ವರದಿಯನ್ನು ಭಾರತವು 'ಆಧಾರರಹಿತ' ಎಂದು ತಳ್ಳಿಹಾಕಿದೆ. ಜೊತೆಗೆ ಅನಗತ್ಯ ಆರೋಪಗಳನ್ನು ಮಾಡುವ ಮುನ್ನ 'ಯಾವುದು ಸರಿ, ಯಾವುದು ತಪ್ಪು' ಎಂಬುದನ್ನು ಪರಿಶೀಲಿಸುವಂತೆ ತಜ್ಞರಿಗೆ ಕರೆ ನೀಡಿದೆ.
ವಿಶ್ವಸಂಸ್ಥೆಯಲ್ಲಿ ಭಾರತ ನಿಯೋಗದ ಶಾಶ್ವತ ಕಾರ್ಯದರ್ಶಿ ಅನುಜ್ ಸ್ವರೂಪ್ ಅವರು ವಿಶ್ವಸಂಸ್ಥೆಯ ಮಹಾಸಭೆಯ 81ನೇ ಅಧಿವೇಶನದಲ್ಲಿ ಮಾನವ ಹಕ್ಕು ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ಶಾಂತಿಯುತ ಸಭೆ ಮತ್ತು ಸಂಘಟನೆಯ ಸ್ವಾತಂತ್ರ್ಯ' ವಿಷಯದ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಜಿನಾ ರೊಮೆರೊ ಅವರು ವರದಿ ನೀಡಿದ್ದರು.
'ಭಾರತದ ಯುವ ಸಮುದಾಯ (ಕಾಕ್ರೋಚ್ ಜನತಾ ಪಾರ್ಟಿ) ರಾಜಕೀಯ ವಿಡಂಬನಾ ಚಳವಳಿ ನಡೆಸಿದೆ. ಮಾನಸಿಕ ಆರೋಗ್ಯ ಅಥವಾ ಲಿಂಗ ಸಮಾನತೆ ಬಗ್ಗೆ ಚರ್ಚಿಸಿದರೆ ಪ್ರತೀಕಾರ ಅಥವಾ ಕಳಂಕ ಎದುರಿಸುತ್ತಾರೆ ಎಂದು ಅಲ್ಲಿನ ಯುವ ಸಮುದಾಯ ಹೇಳುತ್ತಿದೆ' ಎಂದು ಜಿನಾ ವರದಿಯಲ್ಲಿ ಉಲ್ಲೇಖಿಸಿದ್ದರು.
'ಯಾವುದೇ ಸಾಕ್ಷ್ಯ ಇಲ್ಲದೆ ಜಿನಾ ಅವರು ಹೆಸರಿಲ್ಲದ ಹೇಳಿಕೆಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ' ಎಂದು ತಿರುಗೇಟು ನೀಡಿದ್ದಾರೆ.
'ಅನಾಮಧೇಯ ಮತ್ತು ಅನಧಿಕೃತ ಹೇಳಿಕೆಗಳ ಆಧಾರದ ಮೇಲೆ ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆಯ ವಿರುದ್ಧದ ಇಂತಹ ಆರೋಪವು ಸುಳ್ಳಿನಿಂದ ಕೂಡಿದೆ. ಇದು ವಿಶ್ವಸಂಸ್ಥೆಯ ವರದಿಯಂತೆ ಬಿಂಬಿಸಲಾದ 'ಗಾಳಿಸುದ್ದಿ'ಯಾಗಿದೆ. ನಮ್ಮ ನಿಯೋಗವು ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ' ಎಂದೂ ಸ್ವರೂಪ್ ಹೇಳಿದ್ದಾರೆ.
'ಅನಧಿಕೃತ ಮಾಹಿತಿಗಳನ್ನು ನೆಚ್ಚಿಕೊಳ್ಳುವವರು ತಮ್ಮ ಹುದ್ದೆಗೆ ಅನ್ಯಾಯ ಎಸಗುತ್ತಿದ್ದಾರೆ. ವಿಶೇಷ ವರದಿಗಾರರು ಯಾವುದೇ ದೇಶದ ಬಗ್ಗೆ ದೂಷಿಸುವ ಮೊದಲು ಪರಿಶೀಲಿಸಬೇಕು. ತಮ್ಮ ವರದಿಗಳಲ್ಲಿ ಅಗತ್ಯವಾದ ನಿಖರತೆ ಹಾಗೂ ನಿಷ್ಪಕ್ಷಪಾತತೆಯನ್ನು ಉಲ್ಲೇಖಿಸಬೇಕು' ಎಂದೂ ಸ್ವರೂಪ್ ಹೇಳಿದ್ದಾರೆ.
ಈ ರೀತಿ ಸ್ವೇಚ್ಛಾನುಸಾರ ವರದಿ ಮಾಡುವುದರಿಂದ ವಿಶ್ವಸಂಸ್ಥೆ ಮತ್ತು ಅದರ ಅಂಗಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆಯುಂಟಾಗುತ್ತದೆ ಎಂದು ಸ್ವರೂಪ್ ಬೇಸರ ಹೊರಹಾಕಿದ್ದಾರೆ.
ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಶಾಂತಿಯುತ ಸಭೆ ಸೇರುವ ಮತ್ತು ಸಂಘಟಿತರಾಗುವ ಹಕ್ಕುಗಳ ಸ್ವಾತಂತ್ರ್ಯಗಳನ್ನು ಖಾತರಿಪಡಿಸುತ್ತದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದೊಂದಿಗೆ ಈ ಸ್ವಾತಂತ್ರ್ಯಗಳನ್ನು ನಮ್ಮ ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ನೀಡಲಾಗಿದೆ. ಇವುಗಳನ್ನು ಸ್ವತಂತ್ರ ನ್ಯಾಯಾಂಗ, ಮುಕ್ತ ಪತ್ರಿಕಾರಂಗ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಕ್ಷಿಸುತ್ತದೆ ಎಂದಿದ್ದಾರೆ.



