ರಾಜ್‌ಕೋಟ್‌ನಲ್ಲಿ ಗರಿಷ್ಠ 17 ಮಂದಿ ಸೆರೆ; ಕ್ಲಿನಿಕ್‌ಗಳಿಗೆ ಬೀಗ ಜಡಿದು ಪರಾರಿಯಾದ ಹಲವರು
ಪೋರಬಂದರ್: ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ ನಕಲಿ ವೈದ್ಯರ ವಿರುದ್ಧ ಗುಜರಾತ್ ಸರ್ಕಾರ ವ್ಯಾಪಕ ಕಾರ್ಯಾಚರಣೆ ನಡೆಸಿದ್ದು, ಕೇವಲ ಹದಿನೈದು ದಿನಗಳ ಅವಧಿಯಲ್ಲಿ ರಾಜ್ಯಾದ್ಯಂತ ೪೦ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ನಕಲಿ ವೈದ್ಯರ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿರುವುದು ತನಿಖೆಯಿಂದ ಬಯಲಾಗಿದೆ.
ಚಿಕಿತ್ಸಾ ವೈಫಲ್ಯ ಮತ್ತು ಅಕ್ರಮ ಕ್ಲಿನಿಕ್‌ಗಳ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ೨೯೮ ವಿಶೇಷ ತನಿಖಾ ತಂಡಗಳನ್ನು (ಸ್ಕ್ವಾಡ್) ರಚಿಸಲಾಗಿತ್ತು. ಸ್ಥಳೀಯ ಪೊಲೀಸರು, ಕ್ರೈಂ ಬ್ರಾಂಚ್, ಸ್ಪೆಷಲ್ ಆಪರೇಷನ್ಸ್ ಗ್ರೂಪ್ (SOG) ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಅಹಮದಾಬಾದ್, ಸೂರತ್, ರಾಜ್‌ಕೋಟ್ ಸೇರಿದಂತೆ ಪ್ರಮುಖ ನಗರಗಳಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ. ಪತ್ತೆಯಾದ ೩೮ ನಕಲಿ ವೈದ್ಯರ ಪೈಕಿ ಈಗಾಗಲೇ ೩೫ ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಂಧಿತರಲ್ಲಿ ಅತಿ ಹೆಚ್ಚು ಅಂದರೆ ೧೭ ಮಂದಿ ರಾಜ್‌ಕೋಟ್ ಒಂದರಲ್ಲೇ ಸೆರೆಯಾಗಿದ್ದಾರೆ. ಸೂರತ್‌ನಲ್ಲಿ ೯, ಗಿರ್ ಸೋಮನಾಥ್‌ನಲ್ಲಿ ೩ ಹಾಗೂ ಸುರೇಂದ್ರನಗರದಲ್ಲಿ ಇಬ್ಬರು ಸೇರಿದಂತೆ ಉಳಿದ ಜಿಲ್ಲೆಗಳಲ್ಲೂ ನಕಲಿ ವೈದ್ಯರನ್ನು ಸೆರೆಹಿಡಿಯಲಾಗಿದೆ. ತಪಾಸಣಾ ತಂಡದ ದಾಳಿಯ ಸುಳಿವು ಪಡೆದ ಹಲವು ನಕಲಿ ವೈದ್ಯರು ಕ್ಲಿನಿಕ್‌ಗಳಿಗೆ ಬೀಗ ಹಾಕಿ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.
ಭವಿಷ್ಯದಲ್ಲಿ ಇಂತಹ ಅಕ್ರಮ ವೈದ್ಯಕೀಯ ಜಾಲ ತಲೆದೋರದಂತೆ ತಡೆಯಲು ಜಿಲ್ಲಾ ಮಟ್ಟದಲ್ಲಿ ವಿಶೇಷ ಕಣ್ಗಾವಲು ಸಮಿತಿಗಳನ್ನು ರಚಿಸಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಮತ್ತು ಔಷಧಿಗಳು ಲಭ್ಯವಿರುವುದರಿಂದ, ಕಡಿಮೆ ಖರ್ಚಿನ ಆಸೆಗೆ ಬಿದ್ದು ನಕಲಿ ಕ್ಲಿನಿಕ್‌ಗಳಿಗೆ ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.



