ಕುಂಬಳೆ: ಫೇಸ್‌ಬುಕ್‌ನಲ್ಲಿ ಕಂಡ ನಕಲಿ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿದ ಕುಂಬಳೆಯ ಯುವಕನೋರ್ವ ತನ್ನ ಬ್ಯಾಂಕ್ ಖಾತೆಯಿಂದ ₹1.94 ಲಕ್ಷ ಕಳೆದುಕೊಂಡಿದ್ದು, ಈ ಸಂಬಂಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂದ್ಯೋಡು ಅಡ್ಕ ನಿವಾಸಿ ಶಫೀಕ್ ಅಲಿ ವಂಚನೆಗೊಳಗಾದ ಯುವಕ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂಬ ಜಾಹೀರಾತು ಶಫೀಕ್ ಅಲಿಗೆ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿತ್ತು. ಹೆಚ್ಚಿನ ವಿವರ ಪಡೆಯಲು ಅವರು ಜಾಹೀರಾತಿನಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದು, ತಕ್ಷಣವೇ ಬ್ಯಾಂಕ್‌ನ ಹೆಸರನ್ನೇ ಹೋಲುವ ನಕಲಿ ವೆಬ್‌ಸೈಟ್ ತೆರೆದುಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ ಒಟ್ಟು ₹1,93,997 ಹಣ ಕಡಿತಗೊಂಡಿದೆ.
ಖಾತೆಯಿಂದ ಹಣ ವರ್ಗಾವಣೆಯಾಗುತ್ತಿದ್ದಂತೆ ಎಚ್ಚೆತ್ತ ಯುವಕ, ಕೂಡಲೇ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ. ಬಳಿಕ ಕುಂಬಳೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಪರಿಚಿತ ಹಾಗೂ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು, ಒಟಿಪಿ (OTP) ಅಥವಾ ವೈಯಕ್ತಿಕ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ಸೈಬರ್ ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ, ಇಂತಹ ಸೈಬರ್ ವಂಚನೆ ಪ್ರಕರಣಗಳು ಮರುಕಳಿಸುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.


