ವಿಶಾಖಪಟ್ಟಣದಲ್ಲಿ ಆರು ದಿನಗಳ ಜಂಟಿ ತರಬೇತಿ ಪೂರ್ಣ; ಎರಡೂ ದೇಶಗಳ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಸಿಬ್ಬಂದಿ ಭಾಗಿ
ವಿಶಾಖಪಟ್ಟಣಂ: ಭಾರತ ಮತ್ತು ಅಮೆರಿಕ ನಡುವಿನ ಐದನೇ ತ್ರಿವಿಧ ಸೇನಾ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಜಂಟಿ ಸಮರಾಭ್ಯಾಸ 'ಟೈಗರ್ ಟ್ರಯಂಫ್ 2026' ವಿಶಾಖಪಟ್ಟಣದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಅಕ್ಟೋಬರ್ 31ರಿಂದ ನವೆಂಬರ್ 5ರವರೆಗೆ ನಡೆದ ಈ ಜಂಟಿ ಸೇನಾ ತರಬೇತಿಯಲ್ಲಿ ಎರಡೂ ದೇಶಗಳ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿ ಭಾಗವಹಿಸಿದ್ದರು.
ವಿಪತ್ತು ನಿರ್ವಹಣಾ ಕಾರ್ಯಾಚರಣೆಗಳು, ದ್ವಿಪಕ್ಷೀಯ ರಕ್ಷಣಾ ಸಹಕಾರ ಹಾಗೂ ಸೇನಾ ಪಡೆಗಳ ನಡುವಿನ ಪರಸ್ಪರ ಸಮನ್ವಯವನ್ನು ಮತ್ತಷ್ಟು ಬಲಪಡಿಸುವುದು ಈ ಸಮರಾಭ್ಯಾಸದ ಪ್ರಮುಖ ಉದ್ದೇಶವಾಗಿತ್ತು. ಭೂಮಿ ಮತ್ತು ಸಮುದ್ರ ಎರಡೂ ಪ್ರದೇಶಗಳಲ್ಲಿ ನಡೆಸಬಹುದಾದ ಜಂಟಿ ಉಭಯಚರ ಕಾರ್ಯಾಚರಣೆಗಳಿಗೂ ತರಬೇತಿಯಲ್ಲಿ ಆದ್ಯತೆ ನೀಡಲಾಯಿತು.
ಸ್ಟಾಫ್ ಎಕ್ಸರ್‌ಸೈಸ್ ಮತ್ತು ಟೇಬಲ್‌ಟಾಪ್ ಎಕ್ಸರ್‌ಸೈಸ್‌ಗಳ ಮೂಲಕ ಸೈಬರ್ ಭದ್ರತೆ, ವೈದ್ಯಕೀಯ ಕಾರ್ಯಾಚರಣೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಅನುಭವ ಹಾಗೂ ಉತ್ತಮ ಕಾರ್ಯವಿಧಾನಗಳನ್ನು ಎರಡೂ ದೇಶಗಳ ಸೇನಾ ಸಿಬ್ಬಂದಿ ಪರಸ್ಪರ ಹಂಚಿಕೊಂಡರು.
ಈಸ್ಟರ್ನ್ ಫ್ಲೀಟ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಶಾಲ್ ಬಿಷ್ಣೋಯ್ ಹಾಗೂ ಅಮೆರಿಕದ ಪೆಸಿಫಿಕ್ ಫ್ಲೀಟ್‌ನ ವೈಸ್ ಕಮಾಂಡರ್ ರಿಯರ್ ಅಡ್ಮಿರಲ್ ಜಾಕ್ವಿನ್ ಜೆ. ಮಾರ್ಟಿನೆಜ್ ಡಿ ಪಿನಿಲ್ಲೋಸ್ ಅವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಿತು.
2019ರಲ್ಲಿ ಆರಂಭಗೊಂಡ ಈ ಜಂಟಿ ಸಮರಾಭ್ಯಾಸವು ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಭದ್ರತೆ ಹಾಗೂ ವಿಪತ್ತು ನಿರ್ವಹಣಾ ಕಾರ್ಯಾಚರಣೆಗಳಿಗೆ ಮಹತ್ವದ ಬಲ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.



