ಕಾಸರಗೋಡು: ಗಡಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದ್ದು, ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಕಾಸರಗೋಡು ರೈಲ್ವೆ ನಿಲ್ದಾಣದ ಚಿತ್ರಣ ವೇಗವಾಗಿ ಬದಲಾಗುತ್ತಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಮುಖ ದೂರದೂರುಗಳ ರೈಲುಗಳು ನಿಲುಗಡೆಯಾಗುವ ಈ ನಿಲ್ದಾಣದಲ್ಲಿ ಪ್ರಯಾಣಿಕರ ಬಹುಕಾಲದ ನಿರೀಕ್ಷೆಯಾಗಿದ್ದ ಎಸ್ಕಲೇಟರ್ ಹಾಗೂ ಅತ್ಯಾಧುನಿಕ ತುರ್ತು ವೈದ್ಯಕೀಯ ಚಿಕಿತ್ಸಾ ಕೊಠಡಿ ಶೀಘ್ರದಲ್ಲೇ ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿವೆ.
₹50 ಕೋಟಿ ವೆಚ್ಚದ ಸಮಗ್ರ ಅಭಿವೃದ್ಧಿ, ₹4.16 ಕೋಟಿಯ ಎಸ್ಕಲೇಟರ್: ಅಮೃತ್ ಭಾರತ್ ಯೋಜನೆಯಡಿ ಸುಮಾರು ₹50 ಕೋಟಿ ವೆಚ್ಚದಲ್ಲಿ ನಿಲ್ದಾಣದ ಸಮಗ್ರ ಪುನರುಜ್ಜೀವನ ಕಾರ್ಯ ನಡೆಯುತ್ತಿದ್ದು, ಪಾದಚಾರಿ ಮೇಲ್ಸೇತುವೆಯಲ್ಲಿ ₹4.16 ಕೋಟಿ ವೆಚ್ಚದಲ್ಲಿ ಎಸ್ಕಲೇಟರ್ ಅಳವಡಿಕೆ ಕಾರ್ಯ ಅಂತಿಮ ಹಂತ ತಲುಪಿದೆ. ಆರಂಭಿಕ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ಯಂತ್ರಭಾಗಗಳ ಜೋಡಣೆ ಪ್ರಕ್ರಿಯೆ ಮುಗಿದ ತಕ್ಷಣವೇ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. 2023ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಹೊಸ ಮೇಲ್ಸೇತುವೆ ಹಾಗೂ ಲಿಫ್ಟ್ ಸೌಲಭ್ಯ: ಪ್ಲಾಟ್‌ಫಾರ್ಮ್ 1 ಹಾಗೂ ಇತರ ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುವ ಒಂದು ಜೋಡಿ ಲಿಫ್ಟ್‌ಗಳು ಈಗಾಗಲೇ ಬಳಕೆಯಲ್ಲಿದ್ದು, ಹಳೆಯ ಕಿರಿದಾದ ಸೇತುವೆಯ ಬದಲಿಗೆ ವಿಶಾಲವಾದ ನೂತನ ಮೇಲ್ಸೇತುವೆ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನೊಂದು ಜೋಡಿ ಲಿಫ್ಟ್‌ಗಳ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನೂತನ ಸೇತುವೆ ಪೂರ್ಣಗೊಂಡ ಬಳಿಕ ಇವುಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು.
‘ಗೋಲ್ಡನ್ ಅವರ್’ ಜೀವ ರಕ್ಷಣೆಗೆ 'ಯೇನ್‌ಕೇರ್': ಮಂಗಳೂರಿನ ಯೇನಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಜಂಟಿ ಸಹಯೋಗದೊಂದಿಗೆ ನಿಲ್ದಾಣದಲ್ಲಿ 'ಯೇನ್‌ಕೇರ್' ತುರ್ತು ಚಿಕಿತ್ಸಾ ಕೊಠಡಿ ಆರಂಭವಾಗುತ್ತಿದೆ. ರೈಲು ಪ್ರಯಾಣದ ವೇಳೆ ಸಂಭವಿಸಬಹುದಾದ ಹೃದಯಾಘಾತ ಅಥವಾ ಗಂಭೀರ ಅನಾರೋಗ್ಯದ ಸಂದರ್ಭಗಳಲ್ಲಿ ‘ಗೋಲ್ಡನ್ ಅವರ್’ ಒಳಗೆ ರೋಗಿಗೆ ತಕ್ಷಣ ಜೀವ ರಕ್ಷಕ ಪ್ರಾಥಮಿಕ ಚಿಕಿತ್ಸೆ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಮತ್ತೊಂದು ಬದಿಯಲ್ಲೂ ಎಸ್ಕಲೇಟರ್ ಅಳವಡಿಕೆಗೆ ಆಗ್ರಹ: ಸದ್ಯ ಎಸ್ಕಲೇಟರ್ ಸೌಲಭ್ಯವನ್ನು ಪ್ಲಾಟ್‌ಫಾರ್ಮ್ ಒಂದರ ಬದಿಗೆ ಮಾತ್ರ ಸೀಮಿತಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಮೇಲ್ಸೇತುವೆಯ ಇನ್ನೊಂದು ಬದಿಯಲ್ಲೂ ಎಸ್ಕಲೇಟರ್ ಅಳವಡಿಸಿದರೆ ಮಾತ್ರ ಲಗೇಜು ಹೊತ್ತ ಪ್ರಯಾಣಿಕರಿಗೆ, ಹಿರಿಯರಿಗೆ ಪೂರ್ಣ ಪ್ರಮಾಣದ ಅನುಕೂಲವಾಗಲಿದ್ದು, ಕಣ್ಣೂರು-ಪಯ್ಯನ್ನೂರು ನಿಲ್ದಾಣಗಳಲ್ಲಿನ ಲೋಪ ಇಲ್ಲಿ ಮರುಕಳಿಸಬಾರದು ಎಂದು ರೈಲ್ವೆ ಪ್ರಯಾಣಿಕರ ಸಂಘದ ಸಂಚಾಲಕ ನಿಸಾರ್ ಪೆರುವಾಡ್ ಅಭಿಪ್ರಾಯಪಟ್ಟಿದ್ದಾರೆ.
ನಿಗದಿತ ಗಡುವಿನೊಳಗೆ ಕಾಮಗಾರಿ ಮುಗಿಸಲು ಒತ್ತಾಯ: ನಿರ್ಮಾಣ ಹಂತದಲ್ಲಿರುವ ಎಸ್ಕಲೇಟರ್, ಲಿಫ್ಟ್ ಹಾಗೂ ತುರ್ತು ಚಿಕಿತ್ಸಾ ಘಟಕಗಳು ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಅತ್ಯಂತ ಅಗತ್ಯವಾಗಿದ್ದು, ರೈಲ್ವೆ ಇಲಾಖೆಯು ಯಾವುದೇ ವಿಳಂಬ ಮಾಡದೆ ನಿಗದಿತ ಗಡುವಿನೊಳಗೆ ಇವುಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕು ಎಂದು ರೈಲ್ವೆ ನಿಲ್ದಾಣ ಸಲಹಾ ಸಮಿತಿ ಸದಸ್ಯ ಫಾರೂಕ್ ಖಾಸ್ಮಿ ಆಗ್ರಹಿಸಿದ್ದಾರೆ.

.jpg)
.jpg)
.jpg)
.jpg)
