ತಿರುವನಂತಪುರಂ: ದೇಶದಲ್ಲೇ ಪ್ರಪ್ರಥಮ ಬಾರಿಗೆ ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡು ಮಾದರಿಯಾಗಿದ್ದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಸಿಯಾಲ್) ಯಶಸ್ಸಿನ ಬೆನ್ನಲ್ಲೇ, ಕೇರಳ ಮತ್ತೊಂದು ಐತಿಹಾಸಿಕ ಹೆಜ್ಜೆಯಿಡಲು ಸಜ್ಜಾಗಿದೆ. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸಹಕಾರ ವಲಯದಲ್ಲಿ ಸ್ವತಂತ್ರ ವಿಮಾನಯಾನ ಸಂಸ್ಥೆಯನ್ನು (ಏರ್‌ಲೈನ್ಸ್) ಪ್ರಾರಂಭಿಸಲು ಸಿದ್ಧತೆಗಳು ಆರಂಭವಾಗಿದ್ದು, ಇದಕ್ಕಾಗಿ ಈಗಾಗಲೇ ಸಹಕಾರ ಸಂಘವನ್ನು ನೋಂದಣಿ ಮಾಡಲಾಗಿದೆ.
ಸುಮಾರು ₹2 ಲಕ್ಷ ಕೋಟಿ ವೆಚ್ಚ ಮಾಡಿ ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸುವ ‘ತಿರುವನಂತಪುರಂ–ಕಾಸರಗೋಡು ಅರೆ-ವೇಗದ ರೈಲು’ (ಸಿಲ್ವರ್ ಲೈನ್) ನಿರ್ಮಿಸುವುದಕ್ಕಿಂತಲೂ, ಕಡಿಮೆ ವೆಚ್ಚದ ಈ ಸಹಕಾರಿ ವಿಮಾನಯಾನ ಯೋಜನೆಯೇ ರಾಜ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಆರ್ಥಿಕ ಹಾಗೂ ಸಾರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆರಂಭಿಕ ಬಂಡವಾಳ ಮತ್ತು ಸಂಘಟನಾ ಸ್ವರೂಪ: ಕೇರಳ ನಾಗರಿಕ ವಿಮಾನಯಾನ ಅಭಿವೃದ್ಧಿ ಸಹಕಾರ ಸಂಘದ (Kerala Civil Aviation Development Cooperative Society) ಅಧ್ಯಕ್ಷ ಸಿ.ಎನ್. ವಿಜಯಕೃಷ್ಣನ್ ಅವರ ನೇತೃತ್ವದಲ್ಲಿ ಸಂಸ್ಥೆಯ ರಚನೆಗೆ ಸಿದ್ಧತೆಗಳು ನಡೆಯುತ್ತಿವೆ. ಒಟ್ಟು ₹50 ಕೋಟಿ ಷೇರು ಬಂಡವಾಳ ಸಂಗ್ರಹವಾದ ಕೂಡಲೇ ವಿಮಾನಯಾನ ಸಂಸ್ಥೆಯನ್ನು ಕಂಪನಿಯಾಗಿ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಲಿದೆ. ಸಂಸ್ಥೆ ನೋಂದಣಿಯಾದ ಮೊದಲ ವಾರದಲ್ಲೇ ಸಾರ್ವಜನಿಕರಿಂದ ಸುಮಾರು ₹5 ಕೋಟಿ ಬಂಡವಾಳ ಹರಿದುಬಂದಿದೆ. ಒಟ್ಟಾರೆಯಾಗಿ ಕನಿಷ್ಠ ₹400 ಕೋಟಿ ನಿಧಿ ಕ್ರೋಡೀಕರಿಸಿದ ಬಳಿಕವೇ ವಿಮಾನ ಹಾರಾಟದ ಕಾರ್ಯಾಚರಣೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿದೆ.
ನೆಡುಂಬಾಶ್ಶೇರಿ (ಕೊಚ್ಚಿ) ವಿಮಾನ ನಿಲ್ದಾಣದ ಮಾದರಿಯಲ್ಲೇ ಈ ಯೋಜನೆಯನ್ನು ರೂಪಿಸಲಾಗಿದ್ದು, ಮುಖ್ಯಮಂತ್ರಿಗಳು ಈ ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ಸಹಕಾರ ಸಚಿವರು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಸಾರ್ವಜನಿಕರು ಮತ್ತು ಅನಿವಾಸಿ ಭಾರತೀಯರಿಂದ ಬಂಡವಾಳ ಸಂಗ್ರಹಿಸಲಾಗಲಿದ್ದು, ಸರ್ಕಾರದ ಪಾಲಿನ ಷೇರು ಕೂಡ ಇದರಲ್ಲಿ ಇರಲಿದೆ.
ಪ್ರಾದೇಶಿಕ ಸಂಪರ್ಕ ಹಾಗೂ ವಿಮಾನ ಮಾರ್ಗಗಳು: ರಾಜ್ಯದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ವ್ಯಾಪಕ ಬೇಡಿಕೆಯಿದ್ದು, ದುಬಾರಿ ಟಿಕೆಟ್ ದರಗಳ ಹೊರತಾಗಿಯೂ ಆಸನಗಳು ಭರ್ತಿಯಾಗುತ್ತಿವೆ. ವಂದೇ ಭಾರತ್ ದರಕ್ಕೆ ಸರಿಸಮಾನವಾಗಿ ಅಥವಾ ಅದಕ್ಕಿಂತ ಕೊಂಚ ಹೆಚ್ಚಿನ ದರದಲ್ಲಿ ರಾಜ್ಯದೊಳಗೆ ವಿಮಾನ ಸಂಚಾರ ಕಲ್ಪಿಸಿದರೆ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ದೊರೆಯಲಿದ್ದಾರೆ ಎಂಬುದು ಇಲಾಖೆಯ ಲೆಕ್ಕಾಚಾರವಾಗಿದೆ.
ರಾಜ್ಯದ ಪ್ರಮುಖ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾದ ತಿರುವನಂತಪುರಂ, ಕೊಚ್ಚಿ, ಕೋಯಿಕ್ಕೋಡ್ ಮತ್ತು ಕಣ್ಣೂರುಗಳನ್ನು ಪರಸ್ಪರ ಸಂಪರ್ಕಿಸುವ ಆಂತರಿಕ ವಿಮಾನಗಳ ಕಾರ್ಯಾಚರಣೆ ಈ ಯೋಜನೆಯ ಪ್ರಮುಖ ಆದ್ಯತೆಯಾಗಿದೆ. ಪ್ರಸ್ತುತ ರಾಜಧಾನಿ ತಿರುವನಂತಪುರಂನಿಂದ ಕಲ್ಲಿಕೋಟೆ (ಕರಿಪುರ) ವಿಮಾನ ನಿಲ್ದಾಣಕ್ಕೆ ನೇರ ಅಥವಾ ನಿಗದಿತ ವಿಮಾನಗಳಿಲ್ಲ. ಖಾಸಗಿ ಸಂಸ್ಥೆಗಳೊಂದಿಗೆ ಈ ಕುರಿತು ಸರ್ಕಾರ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಆಂತರಿಕ ಮಾರ್ಗಗಳ ಜತೆಗೆ, ಮುಂಬರುವ ದಿನಗಳಲ್ಲಿ ಮಂಗಳೂರು, ಬೆಂಗಳೂರು, ಚೆನ್ನೈ, ಕೊಯಮತ್ತೂರು ಹಾಗೂ ಮಧುರೈ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳಿಗೂ ಕಡಿಮೆ ವೆಚ್ಚದ ವಿಮಾನ ಸೇವೆ ಆರಂಭಿಸಲು ಚಿಂತನೆ ನಡೆಸಲಾಗಿದೆ. ನಂತರದ ಹಂತಗಳಲ್ಲಿ ಅಂತರರಾಷ್ಟ್ರೀಯ ಮಾರ್ಗಗಳಿಗೂ (ಗಲ್ಫ್ ದೇಶಗಳು) ವಿಸ್ತರಿಸುವ ಯೋಜನೆಯಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಡಿಜಿಸಿಎ (DGCA) ನಿಗದಿಪಡಿಸಿರುವ ಅಗತ್ಯ ಅನುಮತಿಗಳು ಮತ್ತು ಪರವಾನಗಿಗಳು ಸಕಾಲದಲ್ಲಿ ದೊರೆತರೆ, ಮುಂಬರುವ ಓಣಂ ಹಬ್ಬದ ವೇಳೆಗೆ ಮೊದಲ ವಿಮಾನ ಹಾರಾಟ ಆರಂಭಿಸುವ ಗುರಿಯನ್ನು ಸಮಾಜ ಹೊಂದಿದೆ.



