ಕೊಲ್ಲಂ: ಖಾಸಗಿ ಶಾಲೆಯೊಂದರ ಸಮೀಪವಿರುವ ಡಾಂಬರು ಮಿಶ್ರಣ ಘಟಕದಿಂದ ಉಂಟಾದ ಮಾಲಿನ್ಯದಿಂದಾಗಿ ಸುಮಾರು 62 ವಿದ್ಯಾರ್ಥಿಗಳು ವಾಕರಿಕೆ, ಉಸಿರಾಟದ ತೊಂದರೆ ಸೇರಿದಂತೆ ಅಸ್ವಸ್ಥತೆಗೆ ತುತ್ತಾಗಿರುವ ಘಟನೆ ಕೊಲ್ಲಂನ ಕೊಟ್ಟಿಯಾಂನಲ್ಲಿ ನಡೆದಿದೆ.
ಅಸ್ವಸ್ಥಗೊಂಡಿರುವ ಎಲ್ಲ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
"ಹಲವು ವಿದ್ಯಾರ್ಥಿಗಳು ವಾಕರಿಕೆ ಹಾಗೂ ಉಸಿರಾಟದ ತೊಂದರೆಗೆ ಈಡಾಗಿದ್ದಾರೆ. ಆದರೆ, ಅವರ್ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಸದ್ಯ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ" ಎಂದು ತಿಳಿಸಿದ್ದಾರೆ.
ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸಾಗಿಸಲು ಸುಮಾರು 8 ಆಯಂಬುಲೆನ್ಸ್ ಗಳನ್ನು ಬಳಸಲಾಯಿತು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆಯ ಬಳಿಕ, ಶಾಲೆಯ ಸಮೀಪವೇ ಕಾರ್ಯನಿರ್ವಹಿಸುತ್ತಿರುವ ಈ ಡಾಂಬರು ಮಿಶ್ರಣ ಘಟಕದ ಕುರಿತು ಕಳವಳ ವ್ಯಕ್ತವಾಗಿದೆ. ಸ್ಥಳೀಯ ನಿವಾಸಿಗಳು ಮಾಲಿನ್ಯದ ಬಗ್ಗೆ ದೂರು ನೀಡಿದ ಬಳಿಕ, ಈ ಘಟಕವನ್ನು ಮುಚ್ಚಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಂಚಾಯತಿ ಅಧಿಕಾರಿಗಳು ಈ ಘಟಕವನ್ನು ಸ್ಥಗಿತಗೊಳಿಸುವಂತೆ ಮೆಮೊ ಹೊರಡಿಸಿದ ಬಳಿಕ, ಘಟಕದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಆದರೆ, ನ್ಯಾಯಾಲಯದಿಂದ ಅನುಮತಿ ಪಡೆದ ಬಳಿಕ, ಘಟಕ ಪುನಾರಂಭಗೊಂಡಿತು ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಡಾಂಬರು ಮಿಶ್ರಣ ಘಟಕ ಪುನಾರಂಭಗೊಂಡ ಬಳಿಕ, ವಿದ್ಯಾರ್ಥಿಗಳಲ್ಲಿ ಆರೋಗ್ಯ ಸಮಸ್ಯೆಗಳು ತಲೆದೋರಿವೆ ಎಂದು ಹೇಳಲಾಗಿದೆ.



