ತಿರುವನಂತಪುರ: ಅನರ್ಹವಾಗಿ ಆದ್ಯತಾ ಪಡಿತರ ಚೀಟಿಗಳನ್ನು (ರೇಷನ್ ಕಾರ್ಡ್) ಹೊಂದಿರುವವರು ಅವುಗಳನ್ನು ಸಾಮಾನ್ಯ ವರ್ಗಕ್ಕೆ ಬದಲಾಯಿಸಿಕೊಳ್ಳಲು ಡಿಸೆಂಬರ್ 8ರವರೆಗೆ ಕಾಲಾವಕಾಶ ನೀಡಲಾಗಿದೆ. ಹಳದಿ ಮತ್ತು ಗುಲಾಬಿ ಬಣ್ಣದ ಕಾರ್ಡ್‌ಗಳನ್ನು ಹೊಂದಿರುವವರಲ್ಲಿ ಅರ್ಹತೆ ಕಳೆದುಕೊಂಡವರು ಯಾವುದೇ ದಂಡ ಅಥವಾ ಶಿಕ್ಷಾರ್ಹ ಕ್ರಮಗಳಿಲ್ಲದೆ ಸ್ವಯಂಪ್ರೇರಿತವಾಗಿ ಕಾರ್ಡ್‌ಗಳನ್ನು ಹಿಂದಿರುಗಿಸಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.
ನಿಗದಿತ ಅವಧಿಯ ನಂತರ ನಡೆಸುವ ತಪಾಸಣೆಯಲ್ಲಿ ಅನರ್ಹರು ಎಂದು ಕಂಡುಬಂದರೆ, ಅಂತಹವರಿಂದ ಇದುವರೆಗೆ ಪಡೆದಿರುವ ಪಡಿತರ ಆಹಾರ ಧಾನ್ಯಗಳ ಮಾರುಕಟ್ಟೆ ಮೌಲ್ಯವನ್ನು ದಂಡವಾಗಿ ವಸೂಲಿ ಮಾಡಲಾಗುವುದು. ಜೀವನಮಟ್ಟ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಿದ್ದರೂ ಆದ್ಯತಾ ಕಾರ್ಡ್‌ಗಳನ್ನು ಮುಂದುವರಿಸುತ್ತಿರುವವರನ್ನು ಈ ಕ್ರಮದ ವ್ಯಾಪ್ತಿಗೆ ತರಲಾಗಿದೆ.
ಯಾರು ಕಾರ್ಡ್ ಹಿಂದಿರುಗಿಸಬೇಕು?
ಸರ್ಕಾರಿ, ಅರೆ ಸರ್ಕಾರಿ ನೌಕರರು, ಶಿಕ್ಷಕರು, ಸಾರ್ವಜನಿಕ ವಲಯ ಹಾಗೂ ಸಹಕಾರಿ ಸಂಸ್ಥೆಗಳ ನೌಕರರು.
ಸೇವಾ ಪಿಂಚಣಿದಾರರು ಮತ್ತು ಆದಾಯ ತೆರಿಗೆ ಪಾವತಿಸುವವರು.
ತಿಂಗಳಿಗೆ 25,000 ರೂ.ಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು (ವಿದೇಶದಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕುಟುಂಬದ ಸದಸ್ಯರು ತಿಂಗಳಿಗೆ 25,000 ರೂ.ಗಿಂತ ಹೆಚ್ಚು ಆದಾಯ ಹೊಂದಿದ್ದರೂ ಆದ್ಯತಾ ಕಾರ್ಡ್‌ಗೆ ಅರ್ಹರಾಗಿರುವುದಿಲ್ಲ).
ಒಂದು ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು, 1,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಮನೆ ಅಥವಾ ಫ್ಲ್ಯಾಟ್ ಹೊಂದಿರುವವರು ಮತ್ತು ಸ್ವಂತ ನಾಲ್ಕು ಚಕ್ರದ ವಾಹನ ಹೊಂದಿರುವವರು ಕಾರ್ಡ್ ಸರೆಂಡರ್ ಮಾಡಬೇಕಾಗುತ್ತದೆ.
ಯಾರಿಗೆ ವಿನಾಯಿತಿ ಇದೆ? ನಿರ್ದಿಷ್ಟ ವರ್ಗಗಳಿಗೆ ಈ ಮಾನದಂಡಗಳಲ್ಲಿ ವಿನಾಯಿತಿ ನೀಡಲಾಗಿದೆ:
ಅರೆಕಾಲಿಕ (ಪಾರ್ಟ್ ಟೈಮ್), ತಾತ್ಕಾಲಿಕ ನೌಕರರು, 4ನೇ ದರ್ಜೆ ಹುದ್ದೆಗಳಿಂದ ನಿವೃತ್ತರಾದ ಪಿಂಚಣಿದಾರರು.
ತಿಂಗಳಿಗೆ 5,000 ರೂ.ಗಿಂತ ಕಡಿಮೆ ಪಿಂಚಣಿ ಪಡೆಯುವವರು ಮತ್ತು 10,000 ರೂ.ಗಿಂತ ಕಡಿಮೆ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಪಡೆಯುವವರು.
ಒಂದು ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ ಪರಿಶಿಷ್ಟ ಪಂಗಡದ ಕುಟುಂಬಗಳು.
ಜೀವನೋಪಾಯಕ್ಕಾಗಿ ಏಕೈಕ ಆದಾಯದ ಮೂಲವಾಗಿ ಟ್ಯಾಕ್ಸಿ ಓಡಿಸುವ ನಾಲ್ಕು ಚಕ್ರದ ವಾಹನ ಮಾಲೀಕರಿಗೆ ವಿನಾಯಿತಿ ಸಿಗಲಿದೆ.
ಅರ್ಜಿ ಸಲ್ಲಿಸುವ ವಿಧಾನ: ಕಾರ್ಡ್ ವರ್ಗವನ್ನು ಬದಲಾಯಿಸಲು ಸಂಬಂಧಪಟ್ಟ ತಾಲೂಕು ಸರಬರಾಜು ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಮೂಲ ರೇಷನ್ ಕಾರ್ಡ್, ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ಹಾಗೂ ವರ್ಗ ಬದಲಾವಣೆಯ ನಿಗದಿತ ಅರ್ಜಿ ನಮೂನೆಯನ್ನು ಹಾಜರುಪಡಿಸಬೇಕು. ಡಿಸೆಂಬರ್ 8ರೊಳಗೆ ಸ್ವಯಂಪ್ರೇರಿತವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸುವವರಿಗೆ ಯಾವುದೇ ದಂಡ ಅಥವಾ ಕಾನೂನು ಕ್ರಮ ಇರುವುದಿಲ್ಲ.
ಅನರ್ಹರ ಕಾರ್ಡ್‌ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬದಲು, ಅರ್ಹತೆಗೆ ಅನುಗುಣವಾಗಿ ಆದ್ಯತಾ ವಿಭಾಗದಿಂದ ಸಾಮಾನ್ಯ ವಿಭಾಗಕ್ಕೆ ಬದಲಾಯಿಸಲಾಗುತ್ತದೆ. ಇದರಿಂದ ಪ್ರಸ್ತುತ ಆದ್ಯತಾ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಸಾಧ್ಯವಾಗಲಿದೆ.



