ನಾಸಿಕ್: ಕೃತಕ ಬುದ್ಧಿಮತ್ತೆ (AI) ಕಣ್ಣಿಮಿಚುವಷ್ಟರಲ್ಲಿ ಸಂಕೀರ್ಣ ಲೆಕ್ಕಾಚಾರಗಳನ್ನು ಪೂರ್ಣಗೊಳಿಸುವ ಈ ಆಧುನಿಕ ಯುಗದಲ್ಲಿ, ಕ್ಯಾಲ್ಕುಲೇಟರ್‌ಗಳಿಗಿಂತಲೂ ವೇಗವಾಗಿ ಮನಸ್ಸಿನಲ್ಲೇ ಲೆಕ್ಕ ಹಾಕಿ ಜಗತ್ತನ್ನೇ ಚಕಿತಗೊಳಿಸುತ್ತಿದ್ದಾನೆ ಮಹಾರಾಷ್ಟ್ರದ ನಾಸಿಕ್ ಮೂಲದ 16 ವರ್ಷದ ಬಾಲಪ್ರತಿಭೆ ಆರ್ಯನ್ ಶುಕ್ಲಾ. ಕೇವಲ ಹದಿನಾರನೇ ವಯಸ್ಸಿಗೆ ಒಂಬತ್ತು ಗಿನ್ನೆಸ್ ವಿಶ್ವ ದಾಖಲೆಗಳು ಹಾಗೂ ಎರಡು ಬಾರಿಯ ಮೆಂಟಲ್ ಕ್ಯಾಲ್ಕುಲೇಶನ್ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಭಾರತದ ಈ ಹದಿಹರೆಯದ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾನೆ.
ಆರನೇ ವಯಸ್ಸಿನಲ್ಲೇ ಆರಂಭವಾದ ಗಣಿತ ಯಾನ
ಆರನೇ ವಯಸ್ಸಿನಲ್ಲಿ ಅಂಕಿ-ಅಂಶಗಳ ಮೇಲೆ ಬೆಳೆದ ಆಸಕ್ತಿ ಕೇವಲ ಒಂದೂವರೆ ವರ್ಷದಲ್ಲಿ ಅಸಾಧಾರಣ ಗಣಿತ ಬುದ್ಧಿಮತ್ತೆಯಾಗಿ ಪರಿವರ್ತನೆಗೊಂಡಿತು. ಎಂಟನೇ ವಯಸ್ಸಿನಲ್ಲಿ ಇಸ್ತಾಂಬುಲ್‌ನಲ್ಲಿ ನಡೆದ ಮೆಮೋರಿಯಾಡ್ ಟರ್ಕಿ ಓಪನ್ ಸ್ಪರ್ಧೆಯಲ್ಲಿ 7 ಚಿನ್ನ ಸೇರಿದಂತೆ ಒಟ್ಟು 10 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಆರ್ಯನ್ ಮೊದಲ ಬಾರಿಗೆ ಜಾಗತಿಕ ಗಮನ ಸೆಳೆದಿದ್ದನು.
ವಿಶ್ವಕಪ್‌ನಲ್ಲಿ ಜಪಾನ್ ಪ್ರಾಬಲ್ಯ ಮುರಿದ ಸಾಧಕ
2022ರಲ್ಲಿ ಜರ್ಮನಿಯ ಪಾಡರ್‌ಬೋರ್ನ್‌ನಲ್ಲಿ ನಡೆದ ಮೆಂಟಲ್ ಕ್ಯಾಲ್ಕುಲೇಶನ್ ವಿಶ್ವಕಪ್‌ನಲ್ಲಿ ವಿಶ್ವಾದ್ಯಂತದ 40 ಅಪ್ರತಿಮ ಗಣಿತ ತಜ್ಞರನ್ನು ಹಿಂದಿಕ್ಕಿ, ಕೇವಲ 12ನೇ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಕಿರೀಟ ಧರಿಸಿದನು. ಈ ಮೂಲಕ 2016ರಿಂದ ಜಪಾನ್ ಹೊಂದಿದ್ದ ಅಪ್ರತಿಮ ಪ್ರಾಬಲ್ಯಕ್ಕೆ ತೆರೆ ಎಳೆದಿದ್ದನು. ಬಳಿಕ 2024ರಲ್ಲಿ 900 ಅಂಕಗಳಿಗೆ ಬರೋಬ್ಬರಿ 819.84 ಅಂಕ ಗಳಿಸಿ, ಎಲ್ಲಾ ಆರು ವಿಭಾಗಗಳಲ್ಲೂ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಶ್ವಕಪ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡು ದಾಖಲೆ ಬರೆದಿದ್ದಾನೆ.
ಗಿನ್ನೆಸ್ ದಾಖಲೆಗಳ ಸರಮಾಲೆ
2024ರ ಫೆಬ್ರವರಿಯಲ್ಲಿ ಇಟಲಿಯಲ್ಲಿ 50 ಐದಂಕಿಯ ಸಂಖ್ಯೆಗಳನ್ನು ಕೇವಲ 25.19 ಸೆಕೆಂಡುಗಳಲ್ಲಿ ಕೂಡುವ ಮೂಲಕ ಆರ್ಯನ್ ತನ್ನ ಮೊದಲ ಗಿನ್ನೆಸ್ ದಾಖಲೆ ಬರೆದಿದ್ದನು. ಅದೇ ವರ್ಷದ ಡಿಸೆಂಬರ್ 4 ರಂದು ದುಬೈನ ಗಿನ್ನೆಸ್ ಕೇಂದ್ರ ಕಚೇರಿಯಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ ಆರು ವಿಶ್ವ ದಾಖಲೆಗಳನ್ನು ಸ್ಥಾಪಿಸಿ ವಿಸ್ಮಯ ಮೂಡಿಸಿದ್ದನು. ಇದರಲ್ಲಿ 50 ಐದಂಕಿಯ ಸಂಖ್ಯೆಗಳನ್ನು 18.71 ಸೆಕೆಂಡುಗಳಲ್ಲಿ, 100 ನಾಲ್ಕಂಕಿಯ ಸಂಖ್ಯೆಗಳನ್ನು 30.9 ಸೆಕೆಂಡುಗಳಲ್ಲಿ ಹಾಗೂ 200 ನಾಲ್ಕಂಕಿಯ ಸಂಖ್ಯೆಗಳನ್ನು 1 ನಿಮಿಷ 9.68 ಸೆಕೆಂಡುಗಳಲ್ಲಿ ಕೂಡಿರುವುದು ಪ್ರಮುಖವಾದವು. ಮುಂದುವರಿದು, 2026ರ ಏಪ್ರಿಲ್‌ನಲ್ಲಿ ಇಟಲಿಯಲ್ಲಿ 10 ಎಂಟಂಕಿಯ ಸಂಖ್ಯೆಗಳ ವರ್ಗಮೂಲವನ್ನು (Square Root) ಕೇವಲ 71.22 ಸೆಕೆಂಡುಗಳಲ್ಲಿ ಪತ್ತೆಹಚ್ಚಿ ಇನ್ನೂ ಎರಡು ಗಿನ್ನೆಸ್ ದಾಖಲೆಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದ್ದಾನೆ.
ಶೈಕ್ಷಣಿಕ ಸಾಧನೆ ಮತ್ತು ಯುವ ಪೀಳಿಗೆಗೆ ಮಾರ್ಗದರ್ಶನ
ನಾಸಿಕ್‌ನ ದೆಹಲಿ ಪಬ್ಲಿಕ್ ಶಾಲೆಯಲ್ಲಿ 11ನೇ ತರಗತಿ (ಪಿಯುಸಿ ಪ್ರಥಮ ವರ್ಷ) ಓದುತ್ತಿರುವ ಆರ್ಯನ್ ಶೈಕ್ಷಣಿಕವಾಗಿಯೂ ಮುಂಚೂಣಿಯಲ್ಲಿದ್ದು, 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 97ರಷ್ಟು ಅಂಕಗಳನ್ನು ಗಳಿಸಿದ್ದಾನೆ. ಪ್ರಸ್ತುತ ಗ್ಲೋಬಲ್ ಮೆಂಟಲ್ ಕ್ಯಾಲ್ಕುಲೇಟರ್ಸ್ ಅಸೋಸಿಯೇಷನ್‌ನ ಸಂಸ್ಥಾಪಕ ಮಂಡಳಿ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿರುವ ಈತ, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಮಾನಸಿಕ ಗಣಿತದ ಸೂತ್ರಗಳು ಮತ್ತು ಕೌಶಲ್ಯಗಳನ್ನು ಕಲಿಸುವಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ.



