ಕುಂಬಳೆ: ಕುಂಬಳೆ-ಮುಳ್ಳೇರಿಯಾ ಕೆ.ಎಸ್.ಟಿ.ಪಿ. ರಸ್ತೆಯ ಬದಿಯಲ್ಲಿರುವ ತಟ್ಟುಕಡೆಗಳ (ರಸ್ತೆಬದಿ ಹೋಟೆಲ್) ಮುಂದೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಪಾದಚಾರಿಗಳು ತೀವ್ರ ತೊಂದರೆ ಹಾಗೂ ಅಪಾಯದ ಭೀತಿ ಎದುರಿಸುವಂತಾಗಿದೆ.
ಚಹಾ ಕುಡಿಯುವ ನೆಪದಲ್ಲಿ ಸರಕು ಸಾಗಾಟ ವಾಹನಗಳು ಸೇರಿದಂತೆ ಭಾರಿ ಗಾತ್ರದ ವಾಹನಗಳನ್ನು ರಸ್ತೆಬದಿಯಲ್ಲಿ ಅಜಾಗರೂಕತೆಯಿಂದ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಪಾದಚಾರಿಗಳು ಫುಟ್‌ಪಾತ್ ಬಿಟ್ಟು ವಾಹನ ದಟ್ಟಣೆಯಿರುವ ಡಾಂಬರು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸಮಸ್ಯೆಯ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಪೂಜಾರಿ ಅವರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಸಂಜೆ ವೇಳೆ ತೀವ್ರ ಸಂಚಾರ ದಟ್ಟಣೆ: ಕುಂಬಳೆ ನಗರದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಖಾಸಗಿ ಶಾಲೆಯ ಸಮೀಪ ಅನೇಕ ತಟ್ಟುಕಡೆಗಳು ಕಾರ್ಯಾಚರಿಸುತ್ತಿವೆ. ಸಂಜೆಯ ವೇಳೆ ಇಲ್ಲಿ ವ್ಯಾಪಾರ ಹೆಚ್ಚಾಗಿರುತ್ತದೆ. ಶಾಲೆ ಬಿಡುವ ಸಮಯ ಮತ್ತು ಕೆಲಸ ಮುಗಿಸಿ ಜನರು ಮನೆಗೆ ಮರಳುವ ಸಮಯವಾಗಿರುವುದರಿಂದ ಈ ವೇಳೆ ರಸ್ತೆಯಲ್ಲಿ ಭಾರಿ ಜನಸಂದಣಿ ಹಾಗೂ ವಾಹನ ದಟ್ಟಣೆ ಇರುತ್ತದೆ. ಇದೇ ಸಂದರ್ಭದಲ್ಲಿ ಭಾರಿ ವಾಹನಗಳನ್ನು ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸುವುದರಿಂದ ಇತರ ವಾಹನಗಳ ಸಂಚಾರಕ್ಕೂ ಹಾಗೂ ಪಾದಚಾರಿಗಳಿಗೂ ತೀವ್ರ ಅಡಚಣೆಯಾಗುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ: ಅಂತಾರಾಜ್ಯ ಹೆದ್ದಾರಿಗೆ ಸಮಾನವಾದ ವಾಹನ ದಟ್ಟಣೆ ಇರುವ ಕೆ.ಎಸ್.ಟಿ.ಪಿ. ರಸ್ತೆಗಳಲ್ಲಿ ಪಾದಚಾರಿಗಳ ಸಂಚಾರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವಂತೆ ವಾಹನ ನಿಲುಗಡೆ ಮಾಡುವುದು ಮೋಟಾರು ವಾಹನ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ಪಂಚಾಯಿತಿ ಅಧಿಕಾರಿಗಳು, ಕುಂಬಳೆ ಪೊಲೀಸರು ಹಾಗೂ ಮೋಟಾರು ವಾಹನ ಇಲಾಖೆಯ ಅಧಿಕಾರಿಗಳು ಪ್ರತಿನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದರೂ ಸಂಚಾರ ದಟ್ಟಣೆ ಮತ್ತು ಪಾದಚಾರಿಗಳ ಸಂಕಷ್ಟವನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ರವಿ ಪೂಜಾರಿ ಆರೋಪಿಸಿದ್ದಾರೆ.
ಅತಿವೇಗವಾಗಿ ಬರುವ ವಾಹನಗಳ ನಡುವೆ ಶಾಲಾ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವುದು ದೊಡ್ಡ ಅಪಘಾತಗಳಿಗೆ ಆಹ್ವಾನ ನೀಡಿದಂತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಅನಧಿಕೃತವಾಗಿ ಪಾರ್ಕಿಂಗ್ ಮಾಡುವ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.



