ಉಪ್ಪಳ: ಐತಿಹಾಸಿಕ ಜೋಡುಕಲ್ಲು ಗಣೇಶ ಮಂದಿರದ ಸಂರಕ್ಷಣೆಗಾಗಿ ಹಮ್ಮಿಕೊಳ್ಳಲಾಗಿರುವ ಭಜನೆ, ನಾಮಜಪ, ಯಾಗ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ನಿರಂತರವಾಗಿ ಮುಂದುವರಿದಿವೆ.
ಕಾರ್ಯಕ್ರಮದ ಅಂಗವಾಗಿ ನಿನ್ನೆ ರಾತ್ರಿ ಮಂದಿರದ ಆವರಣದಲ್ಲಿ ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದೆ ವಿದುಷಿ ಮಂಜುಳಾ ಜೆ. ರಾವ್ ಇರಾ ಅವರಿಂದ ‘ಶ್ರೀರಾಮ ಭಕ್ತ ಹನುಮ’ ಎಂಬ ಹರಿಕಥಾ ಕಾಲಕ್ಷೇಪ ಜರುಗಿತು. ಹಾರ್ಮೋನಿಯಂನಲ್ಲಿ ಸತ್ಯನಾರಾಯಣ ಐಲ ಹಾಗೂ ತಬಲದಲ್ಲಿ ಸಚಿನ್ ಕೊಂಡೆವೂರು ಸಾಥ್ ನೀಡಿದರು.
ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣಾ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಚತುರ್ವಿಂಶತಿ ನಾಳಿಕೇರ ಗಣಹೋಮ ಹಾಗೂ ಗಣಪತ್ಯಥರ್ವಶೀರ್ಷ ಯಾಗ ಆರಂಭಗೊಂಡಿದ್ದು, ನೂರಾರು ಭಕ್ತರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.

