ಬದಿಯಡ್ಕ: ಸ್ಥಳೀಯ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ 65ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವು ಅತ್ಯಂತ ಉತ್ಸಾಹ ಮತ್ತು ಸೌಹಾರ್ದಯುತ ವಾತಾವರಣದಲ್ಲಿ ನಡೆಯುತ್ತಿದ್ದು, ಕಲಾಪ್ರೇಮಿಗಳ ಹಾಗೂ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಉಪಜಿಲ್ಲೆಯ 94 ಶಾಲೆಗಳಿಂದ ಆಗಮಿಸಿರುವ ಸಾವಿರಾರು ವಿದ್ಯಾರ್ಥಿಗಳು 13 ಪ್ರತ್ಯೇಕ ವೇದಿಕೆಗಳಲ್ಲಿ ತಮ್ಮ ಕಲಾ ಕೌಶಲವನ್ನು ಪ್ರದರ್ಶಿಸುತ್ತಿದ್ದಾರೆ.
ಶಿಸ್ತುಬದ್ಧ ವಾಹನ ಪಾರ್ಕಿಂಗ್ ವ್ಯವಸ್ಥೆ: ಕಲೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಸಾರ್ವಜನಿಕರಿಗೆ ಸಂಚಾರ ದಟ್ಟಣೆ ಉಂಟಾಗದಂತೆ ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ವ್ಯವಸ್ಥಿತ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಸ್ವಯಂಸೇವಕರು ಹಾಗೂ ಸಂಘಟನಾ ಸಮಿತಿಯ ಶಿಸ್ತಿನ ನಿರ್ವಹಣೆಯಿಂದ ವಾಹನಗಳ ಸುಗಮ ಸಂಚಾರ ಸಾಧ್ಯವಾಗಿದೆ.
ಮಳೆಯ ನಡುವೆಯೂ ಕರಗದ ಉತ್ಸಾಹ: ಆಗಾಗ ಸುರಿಯುತ್ತಿರುವ ತುಂತುರು ಮಳೆಯ ನಡುವೆಯೂ ಸ್ಪರ್ಧಿಗಳು ಮತ್ತು ಪ್ರೇಕ್ಷಕರ ಉತ್ಸಾಹ ಕಿಂಚಿತ್ತೂ ಕಡಿಮೆಯಾಗಿಲ್ಲ. ವೇದಿಕೆಗಳಲ್ಲಿ ಯುವ ಪ್ರತಿಭೆಗಳು ನೀಡುತ್ತಿರುವ ಮನೋಜ್ಞ ಪ್ರದರ್ಶನಗಳಿಗೆ ನೆರೆದ ಪ್ರೇಕ್ಷಕರಿಂದ ನಿರಂತರ ಚಪ್ಪಾಳೆಯ ಪ್ರೋತ್ಸಾಹ ವ್ಯಕ್ತವಾಗುತ್ತಿದೆ.
ಶುಚಿ-ರುಚಿಯ ಭೋಜನ ಹಾಗೂ ಹಸಿರು ಶಿಷ್ಟಾಚಾರ: ಉತ್ಸವದಲ್ಲಿ ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳು, ಶಿಕ್ಷಕರು ಮತ್ತು ಸಾರ್ವಜನಿಕರಿಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಶುಚಿ-ರುಚಿಯಾದ ಊಟೋಪಚಾರವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಲಾಗಿದೆ. ಆಹಾರ ಸಮಿತಿಯ ನೇತೃತ್ವದಲ್ಲಿ ಸಂಪೂರ್ಣ 'ಹಸಿರು ಶಿಷ್ಟಾಚಾರ' (ಗ್ರೀನ್ ಪ್ರೊಟೊಕಾಲ್) ಪಾಲನೆಯೊಂದಿಗೆ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ.

.jpg)
.jpg)
.jpg)
.jpg)
.jpg)
