ಈ ಆರೋಪಗಳು 'ಕಲ್ಪಿತ ಮತ್ತು ದುರುದ್ದೇಶಪೂರಿತ' ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಪನ್ನೂನ್ ನ ಮೊಕದ್ದಮೆಗೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಗಳಿಗೆ ಅಮೆರಿಕದ ನ್ಯಾಯಾಲಯ ನೀಡಿದ್ದ ಸಮನ್ಸ್ ಗಳನ್ನು ರಾಜತಾಂತ್ರಿಕ ಮಾರ್ಗದ ಮೂಲಕ ಭಾರತೀಯ ರಾಯಭಾರಿ ಕಚೇರಿಗೆ ತಲುಪಿಸಿರುವುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
'ನಮ್ಮ ಉನ್ನತ ಅಧಿಕಾರಿಗಳ ವಿರುದ್ಧ ಮಾಡಿರುವ ಕಲ್ಪಿತ ಮತ್ತು ದುರುದ್ದೇಶಪೂರಿತ ಆರೋಪಗಳನ್ನು ನಾವು ತಿರಸ್ಕರಿಸುತ್ತೇವೆ. ಇಂತಹ ಕ್ಷುಲ್ಲಕ ಮೊಕದ್ದಮೆಗಳನ್ನೂ ಒಪ್ಪುವುದಿಲ್ಲ. ಭಾರತದಲ್ಲಿ ನ್ಯಾಯಾಲಯದ ದಾಖಲೆಗಳನ್ನು ತಲುಪಿಸುವಂತೆ ಮಾಡುವ ಯಾವುದೇ ಮನವಿಯನ್ನು ಭಾರತದ ಗೊತ್ತುಪಡಿಸಿದ ಕೇಂದ್ರ ಪ್ರಾಧಿಕಾರವಾದ ಕಾನೂನು ಮತ್ತು ನ್ಯಾಯ ಸಚಿವಾಲಯದ ಮೂಲಕವೇ ಸಲ್ಲಿಸಬೇಕು' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು.
ಅಕ್ಟೋಬರ್ 9ರಂದು ಅಮೆರಿಕದ ವಿದೇಶಾಂಗ ಇಲಾಖೆಯು ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ರಾಜತಾಂತ್ರಿಕ ಮಾರ್ಗದ ಮೂಲಕ ಸಮನ್ಸ್ ಗಳನ್ನು ತಲುಪಿಸಿತ್ತು. ಈ ಸಂಬಂಧದ ರಾಜತಾಂತ್ರಿಕ ಟಿಪ್ಪಣಿಗೆ ಸೆಪ್ಟೆಂಬರ್ 30, 2026ರಂದು ಸಹಿ ಹಾಕಲಾಗಿತ್ತು. ಅಕ್ಟೋಬರ್ 9ರಂದು ಅದನ್ನು ತಲುಪಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.
ಪನ್ನೂನ್ ನಿಂದ ಹತ್ಯೆ ಸಂಚಿನ ಆರೋಪ
ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯ ಕಾನೂನು ಸಲಹೆಗಾರನಾಗಿರುವ ಪನ್ನೂನ್, ತನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಅಮೆರಿಕದ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ದಾಖಲಿಸಿದ್ದಾನೆ. ಈ ಸಂಚಿನ ಹಿಂದೆ ಭಾರತೀಯ ಅಧಿಕಾರಿಗಳಿದ್ದಾರೆ ಎಂದು ಆತ ಆರೋಪಿಸಿದ್ದಾನೆ.
ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ವಿವಿಧ ಭಯೋತ್ಪಾದನಾ ಆರೋಪಗಳ ಹಿನ್ನೆಲೆಯಲ್ಲಿ ಪನ್ನೂನ್ ಗಾಗಿ ಭಾರತೀಯ ತನಿಖಾ ಸಂಸ್ಥೆಗಳು ಹುಡುಕಾಟ ನಡೆಸುತ್ತಿವೆ.
2023ರ ನವೆಂಬರ್ ನಲ್ಲಿ ನ್ಯೂಯಾರ್ಕ್‌ನಲ್ಲಿ ಪನ್ನೂನ್ ನನ್ನು ಹತ್ಯೆ ಮಾಡಲು ವಿಫಲ ಸಂಚು ರೂಪಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್ ಗಳು ಭಾರತೀಯ ಪ್ರಜೆ ನಿಖಿಲ್ ಗುಪ್ತಾ ವಿರುದ್ಧ ಆರೋಪ ಹೊರಿಸಿದ್ದರು. ಈ ಸಂಚಿನಲ್ಲಿ ಭಾರತೀಯ ಸರಕಾರಿ ಉದ್ಯೋಗಿಯೊಬ್ಬರೊಂದಿಗೆ ಸೇರಿ ಕೆಲಸ ಮಾಡಿದ ಆರೋಪವನ್ನು ಗುಪ್ತಾ ಎದುರಿಸುತ್ತಿದ್ದಾರೆ.
ಪನ್ನೂನ್ ನ ಮೊಕದ್ದಮೆಗೆ ಸಂಬಂಧಿಸಿದಂತೆ ಸಮನ್ಸ್ ಗಳನ್ನು ತಲುಪಿಸಿರುವುದು ಪ್ರಕರಣದಲ್ಲಿನ ಆರೋಪಗಳನ್ನು ಅಮೆರಿಕ ಸರಕಾರ ಒಪ್ಪಿಕೊಂಡಿದೆ ಎಂದರ್ಥವಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ರಾಜತಾಂತ್ರಿಕ ಟಿಪ್ಪಣಿಯಲ್ಲಿ ಸ್ಪಷ್ಟಪಡಿಸಿದೆ.
ವಿದೇಶಿ ಸಾರ್ವಭೌಮ ವಿನಾಯಿತಿ ಕಾಯ್ದೆ (FSIA) ಅಡಿಯಲ್ಲಿ ಜಿಲ್ಲಾ ನ್ಯಾಯಾಲಯ ಮಾಡಿರುವ ಮನವಿಯನ್ನು ಪೂರೈಸುವಾಗ ವಿದೇಶಾಂಗ ಇಲಾಖೆಗೆ ಯಾವುದೇ ವಿವೇಚನಾಧಿಕಾರವಿಲ್ಲ ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ. ಅಂದರೆ, ನ್ಯಾಯಾಲಯದ ಮನವಿಯಂತೆ ಸಮನ್ಸ್ ಗಳನ್ನು ತಲುಪಿಸುವುದು ಇಲಾಖೆಯ ಪ್ರಕ್ರಿಯೆಯ ಭಾಗವಾಗಿದ್ದು, ಇದರಿಂದ ಮೊಕದ್ದಮೆಯಲ್ಲಿನ ಆರೋಪಗಳಿಗೆ ಅಮೆರಿಕದ ಸಮ್ಮತಿ ಇದೆ ಎಂದು ಅರ್ಥೈಸಬಾರದು ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
ದೂರುದಾರರು FSIA ಅಡಿಯಲ್ಲಿ ಅಗತ್ಯವಿರುವ ಎಲ್ಲ ಕಾನೂನು ನಿಯಮಗಳನ್ನು ಪಾಲಿಸಿದ್ದಾರೆಯೇ, ಪ್ರತಿವಾದಿಗಳ ಸ್ಥಾನಮಾನ ಅಥವಾ ಸ್ವರೂಪವೇನು, ನ್ಯಾಯಾಲಯದ ದಾಖಲೆಗಳನ್ನು ಅವರಿಗೆ ಕಾನೂನುಬದ್ಧವಾಗಿ ತಲುಪಿಸಲಾಗಿದೆಯೇ ಎಂಬ ಬಗ್ಗೆ ಅಮೆರಿಕ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಅದೇ ರೀತಿ, ಮೊಕದ್ದಮೆಯಲ್ಲಿ ಮಾಡಿರುವ ಆರೋಪಗಳು ಮತ್ತು ಪ್ರತಿವಾದಗಳಲ್ಲಿನ ಹಕ್ಕುಗಳ ಅರ್ಹತೆಯ ಬಗ್ಗೆಯೂ ಯಾವುದೇ ನಿಲುವು ಪ್ರಕಟಿಸಿಲ್ಲ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.
ಅಮೆರಿಕದ ಕಾನೂನಿನ ಪ್ರಕಾರ, ಸಾರ್ವಭೌಮ ವಿನಾಯಿತಿ ಸೇರಿದಂತೆ ನ್ಯಾಯಾಲಯದ ನ್ಯಾಯವ್ಯಾಪ್ತಿಗೆ ಸಂಬಂಧಿಸಿದ ಆಕ್ಷೇಪಣೆಗಳು ಅಥವಾ ಇತರ ಕಾನೂನು ಪ್ರತಿವಾದಗಳನ್ನು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದ ಮುಂದೆಯೇ ಮಂಡಿಸಬೇಕು. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ವಕೀಲರೊಬ್ಬರನ್ನು ಸಂಪರ್ಕಿಸುವುದು ಸೂಕ್ತ ಎಂದು ಟಿಪ್ಪಣಿಯಲ್ಲಿ ಸಲಹೆ ನೀಡಲಾಗಿದೆ.
ಈ ಪ್ರಕರಣದಲ್ಲಿ ಅಮೆರಿಕ ಸರಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಹೀಗಾಗಿ, ಪ್ರಕರಣದ ಇತರ ಪಕ್ಷಗಳ ಪರವಾಗಿ ಸರಕಾರ ವಾದಿಸಲು ಅಥವಾ ಪ್ರತಿನಿಧಿಸಲು ಸಾಧ್ಯವಿಲ್ಲ ಎಂದೂ ರಾಜತಾಂತ್ರಿಕ ಟಿಪ್ಪಣಿಯಲ್ಲಿ ಸ್ಪಷ್ಟಪಡಿಸಲಾಗಿದೆ.

