ಕಾಸರಗೋಡಿನ ನುಳ್ಳಿಪ್ಪಾಡಿಯ ಮನೆಯೊಂದರ ಮಂಚದಡಿ ಅಡಗಿಸಿಟ್ಟಿದ್ದ ಮಾದಕವಸ್ತು ಪತ್ತೆ; 'ಡಾನ್ಸಾಫ್' ತಂಡದಿಂದ ಕಾರ್ಯಾಚರಣೆ
ಕಾಸರಗೋಡು: ನಗರದ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು, ಮನೆಯ ಕೊಠಡಿಯೊಳಗಿನ ಮಂಚದಡಿಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ 38.760 ಗ್ರಾಂ ಎಂಡಿಎಂಎ (MDMA) ಹಾಗೂ 6.650 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ನುಳ್ಳಿಪ್ಪಾಡಿ ರಿಫಾಯಿ ಮಂಜಿಲ್ ನಿವಾಸಿ ರಾಬಿಯತ್ ಎನ್.ಎಚ್. (39), ಕೂಡ್ಲು ಸೂರ್ಲು ಕರಿಪ್ಪೊಡಿ ರಸ್ತೆಯ ಮಲಬಾರ್ ಹೌಸ್‌ನ ಫರ್ಹಾನ್ ಎ.ಎ. (30) ಹಾಗೂ ಮುತ್ತತ್ತೋಡಿ ಹಿದಾಯತ್ ನಗರ ಸೆಕೆಂಡ್ ಸ್ಟ್ರೀಟ್‌ನ ಇಸ್ತಕ್ ನಗರದ ಎ.ಎಂ. ಹೌಸ್‌ನ ಮುಹಮ್ಮದ್ ಸಾದಿಕ್ (32) ಬಂಧಿತ ಆರೋಪಿಗಳು.
ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ವಿಷ್ಣು ಎಲ್. ಅವರ ನೇತೃತ್ವದ ತಂಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದ 'ಡಾನ್ಸಾಫ್' (DANSAF) ತಂಡವು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದೆ. ಪ್ರಮುಖ ಆರೋಪಿ ರಾಬಿಯತ್ ಅವರ ನುಳ್ಳಿಪ್ಪಾಡಿಯ ಪಿಎಂಎಸ್ ರಸ್ತೆ ಸಮೀಪದ ಮನೆಗೆ ದಾಳಿ ನಡೆಸಿದಾಗ, ಕೊಠಡಿಯ ಮಂಚದಡಿಯಲ್ಲಿ ಬಚ್ಚಿಟ್ಟಿದ್ದ ಮಾದಕವಸ್ತುಗಳು ಪತ್ತೆಯಾಗಿವೆ.
ಜಿಲ್ಲೆಯ ವಿವಿಧೆಡೆ ಮಾರಾಟ ಮಾಡುವ ಉದ್ದೇಶದಿಂದ ಈ ಮಾರಕ ಎಂಡಿಎಂಎ ಹಾಗೂ ಗಾಂಜಾವನ್ನು ಮನೆಯಲ್ಲಿ ದಾಸ್ತಾನು ಇರಿಸಲಾಗಿತ್ತು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ. ಕಾಸರಗೋಡು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮೆಲ್ವಿನ್ ಜೋಸೆಫ್ ಅವರ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.


