ಕಾಸರಗೋಡು: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತ ಮಹೋತ್ಸವ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಜಗದ್ಗುರು ಶ್ರೀ ಶಂಕರಾಚಾರ್ಯ ಪೀಠ ಎಡನೀರು ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಕುತ್ಯಾಳ ತರಬೇತಿ ಕೇಂದ್ರ ಹಾಗೂ ಕುತ್ಯಾಳ ಯಕ್ಷಗಾನ ಮೇಳದ ಪ್ರಾರಂಭದ ದಿನಗಳಿಂದಲೂ ಸಕ್ರಿಯ ಪ್ರೋತ್ಸಾಹ ನೀಡುತ್ತಾ ಧಾರ್ಮಿಕ, ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಕೆ.ಎನ್. ವೆಂಕಟ್ರಮಣ ಹೊಳ್ಳ ಮತ್ತು ರೂಪಕಲಾ ದಂಪತಿಗೆ ಸಮಾರಂಭದಲ್ಲಿ ಬಂಗಾರದ ಪದಕ, ಶಾಲು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನಿತ್ತು ‘ಸರ್ವಕ್ಷೇತ್ರ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಲ್ಕೂರ ಪ್ರತಿಷ್ಠಾನದ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಅಗಲಿ ರಾಘವೇಂದ್ರ ರಾವ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ್ ಅಡಪ ಸಂಕಬೈಲು, ವೈದ್ಯಾಧಿಕಾರಿ ಡಾ. ಜಯಶ್ರೀ ನಾಗರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ದಿನೇಶ್, ರಜತರಂಗ ಸಮಿತಿಯ ಅಧ್ಯಕ್ಷ ಡಾ. ಹರಿಕಿರಣ ಬಂಗೇರ, ತರಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ ಕೂಡ್ಲು, ಕೂಡ್ಲು ಮೇಳದ ವ್ಯವಸ್ಥಾಪಕ ರವಿರಾಜ್ ಕೂಡ್ಲು, ಕ್ಷೇತ್ರ ಅನುವಂಶಿಕ ಮೊಕ್ತೇಸರ ಕೆ.ಜಿ. ಶ್ಯಾನುಭಾಗ್, ಕ್ಷೇತ್ರ ತಂತ್ರಿ ರಾಮಕಿಶೋರ ಅಸ್ರ ಹಾಗೂ ರಜತರಂಗದ ಉಪಾಧ್ಯಕ್ಷ ವೈದಿಕ ಶಿರೋಮಣಿ ನಾಗೇಂದ್ರ ಭಟ್ ಉಪಸ್ಥಿತರಿದ್ದರು.
ವಿ.ಜಿ. ಕಾಸರಗೋಡು ಸ್ವಾಗತಿಸಿದರು. ನಾ. ಕಾರಂತ ಪೇರಾಜೆ ಕಾರ್ಯಕ್ರಮ ನಿರೂಪಿಸಿ, ಜಗದೀಶ್ ಕೂಡ್ಲು ವಂದಿಸಿದರು.



