ಶಾಲಾ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ 30 ಮಕ್ಕಳು; ಆರೋಗ್ಯ ಇಲಾಖೆಯಿಂದ ತಪಾಸಣೆ
ಕೋಝಿಕ್ಕೋಡ್: ಕೇರಳದ ವಡಕರ ಸಮೀಪದ ಮೇಪ್ಪಯಿಲ್ ಎಸ್.ಬಿ. ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ಅಪಾಯಕಾರಿ ಶಿಗೆಲ್ಲಾ (Shigella) ಬ್ಯಾಕ್ಟೀರಿಯಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಬಳಿಕ ಆಹಾರ ವಿಷಬಾಧೆಗೆ ಒಳಗಾಗಿ ಈ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಳೆದ ಶುಕ್ರವಾರ ಶಾಲೆಯಲ್ಲಿ ಮಧ್ಯಾಹ್ನದ ಊಟ ಸೇವಿಸಿದ ಮಕ್ಕಳಿಗೆ ಸಂಜೆಯ ವೇಳೆಗೆ ಹೊಟ್ಟೆನೋವು, ವಾಂತಿ, ಭೇದಿ ಮುಂತಾದ ಅಸ್ವಸ್ಥತೆಗಳು ಕಾಣಿಸಿಕೊಂಡಿದ್ದವು. ಶನಿವಾರ, ಭಾನುವಾರ ಹಾಗೂ ಸೋಮವಾರದ ಅವಧಿಯಲ್ಲಿ ಸುಮಾರು ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ವಡಕರ ತಾಲೂಕು ಆಸ್ಪತ್ರೆ ಹಾಗೂ ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು.
ತೀವ್ರ ರೋಗಲಕ್ಷಣಗಳಿದ್ದ ನಾಲ್ವರು ಮಕ್ಕಳ ಮಾದರಿಗಳನ್ನು ಕೋಝಿಕ್ಕೋಡ್‌ನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ ಒಬ್ಬ ಬಾಲಕನಿಗೆ ಶಿಗೆಲ್ಲಾ ಸೋಂಕು ಇರುವುದು ಪರೀಕ್ಷಾ ವರದಿಯಿಂದ ಖಚಿತಪಟ್ಟಿದೆ. ಉಳಿದ ಮಕ್ಕಳ ವರದಿ ಇನ್ನಷ್ಟೇ ಬರಬೇಕಿದೆ.
ಘಟನೆಯ ಹಿನ್ನೆಲೆಯಲ್ಲಿ ಕೋಝಿಕ್ಕೋಡ್ ಜಿಲ್ಲಾ ವೈದ್ಯಾಧಿಕಾರಿ (DMO) ಹಾಗೂ ವಡಕರ ತಾಲೂಕು ಆಸ್ಪತ್ರೆಯ ಸೂಪರಿಂಟೆಂಡೆಂಟ್ ನೇತೃತ್ವದ ವೈದ್ಯಕೀಯ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಯಲ್ಲಿ ಮಕ್ಕಳಿಗೆ ನೀರು ಮತ್ತು ಆಹಾರ ವಿತರಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.



