ನವದೆಹಲಿ: ಕಳೆದ ದಶಕದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಭಾರತವು ಉದಾರವಾದಿ ಪ್ರಜಾಸತ್ತಾತ್ಮಕ ರಾಷ್ಟ್ರಗಳ ಪಟ್ಟಿಯಲ್ಲಿ ಗಣನೀಯವಾಗಿ ಕುಸಿದಿದೆ. ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಹಂತ ಹಂತವಾಗಿ ನಾಶಪಡಿಸಲಾಗಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ತಮ್ಮ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕದಲ್ಲಿ (Belonging: A Journey of Love) ಮೋದಿ ಸರ್ಕಾರದ ಆಡಳಿತ ವೈಖರಿ ಮತ್ತು ನೀತಿಗಳನ್ನು ಟೀಕಿಸಿದ್ದಾರೆ.
ದಶಕಗಳಿಂದ ದೇಶದ ವಿವಿಧ ಭಾಷೆ, ಸಂಸ್ಕೃತಿ ಮತ್ತು ನಂಬಿಕೆಗಳನ್ನು ಒಂದಾಗಿ ಹಿಡಿದಿಟ್ಟಿದ್ದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ಧಕ್ಕೆಯಾಗಿದೆ ಎಂದು ಸೋನಿಯಾ ಕಳವಳ ವ್ಯಕ್ತಪಡಿಸಿದ್ದಾರೆ.
ಮೋದಿ ಸರ್ಕಾರವು ಹೊಸ ಆಡಳಿತ ಪರಿಕಲ್ಪನೆಯನ್ನು ತರಲು ವಿಫಲವಾಗಿದೆ. ಯುಪಿಎ ಅವಧಿಯ ಕನಿಷ್ಠ 30 ಜನಪ್ರಿಯ ಯೋಜನೆಗಳ ಹೆಸರು ಬದಲಾಯಿಸಿ, ಅವುಗಳ ಅನುದಾನವನ್ನು ಕಡಿತಗೊಳಿಸಿ ಜಾರಿಗೆ ತಂದಿದೆ. ಸರ್ಕಾರದ ಲೆಕ್ಕಪರಿಶೋಧನೆ ಸಂಸ್ಥೆ ವರದಿಗಳೇ ಇದರಲ್ಲಿನ ಭ್ರಷ್ಟಾಚಾರವನ್ನು ಬಯಲು ಮಾಡಿವೆ ಎಂದು ಅವರು ಹೇಳಿದ್ದಾರೆ.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಉತ್ತಮವಾಗಿತ್ತು. ಆದರೆ ಇಂದು ದೇಶದ ಪ್ರಮುಖ ಮಾಧ್ಯಮಗಳು ಸರ್ಕಾರದ ಪ್ರಚಾರ ಸಾಧನಗಳಾಗಿ ಬದಲಾಗಿವೆ. ಮೋದಿ ಅವರು ಕಳೆದ 12 ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ ಎಂದು ನೆನಪಿಸಿದ್ದಾರೆ.
ತನಿಖಾ ಸಂಸ್ಥೆಗಳನ್ನು (ಇಡಿ, ಐಟಿ) ಬಳಸಿಕೊಂಡು ವಿಪಕ್ಷ ನಾಯಕರನ್ನು ಬೆದರಿಸುವ ಮತ್ತು ಜೈಲಿಗಟ್ಟುವ ಕೆಲಸ ನಡೆಯುತ್ತಿದೆ. ವಿದ್ಯಾರ್ಥಿಗಳು, ರೈತರು ಮತ್ತು ಮಹಿಳೆಯರ ಶಾಂತಿಯುತ ಪ್ರತಿಭಟನೆಗಳನ್ನು ಹತೋಟಿ ತರಲಾಗಿದೆ. ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು 'ದೇಶದ್ರೋಹಿಗಳು' ಎಂದು ಬಿಂಬಿಸಲು ʼಟ್ರೋಲ್ʼ ಪಡೆಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. 2016ರ ನೋಟು ರದ್ದತಿಯು ಮೋದಿ ಅವರ ಏಕಪಕ್ಷೀಯ ನಿರ್ಧಾರಕ್ಕೆ ಉದಾಹರಣೆಯಾಗಿದ್ದು, ಇದರಿಂದ ದೇಶದ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ ಎಂದು ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.



