ಸಂಪರ್ಕ ರಸ್ತೆಯ ಹೊಂಡ ಮುಚ್ಚಿ ಸಂಚಾರ ಸುಗಮಗೊಳಿಸಿದ ಸ್ವಯಂಸೇವಕರು
ಪೆರ್ಲ: ಸ್ಥಳೀಯ ನಾಲಂದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕ ಸಂಖ್ಯೆ 49 ಹಾಗೂ ನಾಲಂದ ಚಾರಿಟೇಬಲ್ ಟ್ರಸ್ಟ್ನ ಜಂಟಿ ಆಶ್ರಯದಲ್ಲಿ ಕಾಲೇಜು ಸಂಪರ್ಕ ರಸ್ತೆಯ ಸ್ವಚ್ಛತೆ ಹಾಗೂ ದುರಸ್ತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಮುಳ್ಳುಕಂಟಿ, ಗಿಡಗಂಟಿಗಳು ಮತ್ತು ತ್ಯಾಜ್ಯಗಳನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಜತೆಗೆ ರಸ್ತೆಯುದ್ದಕ್ಕೂ ಬಿದ್ದಿದ್ದ ಅಪಾಯಕಾರಿ ಹೊಂಡಗಳನ್ನು ಮುಚ್ಚಿ ವಾಹನ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು.
ಪರಿಸರ ಸ್ವಚ್ಛತೆಯ ಜಾಗೃತಿ ಮೂಡಿಸುವುದರೊಂದಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾದ ಈ ಶ್ರಮದಾನದಲ್ಲಿ ಎನ್ಎಸ್ಎಸ್ ಸ್ವಯಂಸೇವಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ತಮ್ಮ ಸಾಮಾಜಿಕ ಬದ್ಧತೆಯನ್ನು ಮೆರೆದರು.
ಈ ಸಮಾಜಮುಖಿ ಕಾರ್ಯದಲ್ಲಿ ಎನ್ಎಸ್ಎಸ್ ಯೋಜನಾಧಿಕಾರಿ ವರ್ಷಿತ್ ಕೆ., ಉಪ ಪ್ರಾಂಶುಪಾಲ ಶಂಕರ ಖಂಡಿಗೆ, ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥೆ ಕು. ಅನುಪಮ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಸ್ವಯಂಸೇವಕರೊಂದಿಗೆ ಕೈಜೋಡಿಸಿ ಶ್ರಮದಾನಕ್ಕೆ ಸಾಥ್ ನೀಡಿದರು.

.jpg)
.jpg)
